Thursday, January 29, 2026
Google search engine
Homeಚಳುವಳಿಪ್ರೊ.ಬಿ.ಕೃಷ್ಣಪ್ಪ ಹೋರಾಟದ ಹಾದಿಯಲ್ಲಿ ಯುವಸಮುದಾಯ ಹೆಜ್ಜೆ ಹಾಕಲಿ

ಪ್ರೊ.ಬಿ.ಕೃಷ್ಣಪ್ಪ ಹೋರಾಟದ ಹಾದಿಯಲ್ಲಿ ಯುವಸಮುದಾಯ ಹೆಜ್ಜೆ ಹಾಕಲಿ

ಶೋಷಿತ ಸಮುದಾಯಗಳಲ್ಲಿ ಹೋರಾಟದ ಕಿಚ್ಚು ಹತ್ತಿಸಿದ ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಹಾದಿಯಲ್ಲಿ ಯುವಸಮುದಾಯ ಹೆಜ್ಜೆ ಹಾಕಬೇಕಿದೆ. ಶಿಕ್ಷಣ, ಸಂಘಟನೆಯ ಮೂಲಕ ಸಮುದಾಯದ ಅಭಿವೃದ್ಧಿ ಹೊಂದಬೇಕಿದೆ ಎಂದು ಡಾ.ಬಾಬು ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತ ಹಿರಿಯ ಹೋರಾಟಗಾರ ಎನ್.ವೆಂಕಟೇಶ್ ಅಭಿಪ್ರಾಯಪಟ್ಟರು.

ತುಮಕೂರು ನಗರದ ಎನ್.ಆರ್.ಕಾಲೋನಿಯಲ್ಲಿರುವ ಸಮುದಾಯ ಭವನದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ, ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಹಾಗೂ ಒಳಮೀಸಲಾತಿ ಮುಂದಿನ ಹೆಜ್ಜೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರೊ.ಬಿ.ಕೃಷ್ಣಪ್ಪ ಅವರು ಪ್ರಾರಂಭಿಸಿದ ದಲಿತ ಸಂಘರ್ಷ ಸಮಿತಿ ಶೋಷಿತ, ಹಿಂದುಳಿದ ವರ್ಗಗಳಲ್ಲಿ ಸ್ವಾಭಿಮಾನದ ಹೋರಾಟವನ್ನು, ತಾರತಮ್ಯದ ವಿರುದ್ಧ ಹೋರಾಡುವ ಶಕ್ತಿಯನ್ನು ತುಂಬಿತು. ಶೋಷಿತ ಮತ್ತು ಹಿಂದುಳಿದವರು ಇಂದು ಸಂಘಟಿತರಾಗಬೇಕಿದೆ ಎಂದರು.

ದಲಿತ ಸಂಘರ್ಷ ಸಮಿತಿ ಹಾಗೂ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರು ರಾಜೀವ್ ಗಾಂಧಿಯವರ ಸಾವಿನ ಕಾಂಗ್ರೆಸ್ ಪರ ಅನುಕಂಪದ ಅಲೆಯಲ್ಲಿ ಸೋಲನ್ನು ಅನುಭವಿಸಿದರು. ಸೋಲಿನ ನಂತರವೂ ಹೋರಾಟದಿಂದ ವಿಮುಖರಾಗಲಿಲ್ಲ ಎಂದು ಹೇಳಿದರು.

ಚುನಾವಣಾ ರಾಜಕೀಯದಲ್ಲಿ ಸೋಲನ್ನು ಕಂಡ ಪ್ರೊ.ಬಿ.ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿಯೊಂದಿಗೆ, ಬಹುಜನ ಸಮಾಜ ಪಕ್ಷವನ್ನು ರಾಜ್ಯದಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ತಮ್ಮ 59ನೇ ವರ್ಷದಲ್ಲಿ ನಮ್ಮನ್ನು ಅಗಲುವ ಮೂಲಕ ಶೋಷಿತ, ದಲಿತ ವರ್ಗಗಳಲ್ಲಿ ಪ್ರಜ್ವಲಿಸಿದ ಸ್ವಾಭಿಮಾನದ ಜ್ಯೋತಿ ನಂದಿತು ಎಂದು ತಿಳಿಸಿದರು.

ಪ್ರೊ.ಬಿ.ಕೃಷ್ಣಪ್ಪ ಅವರು ತೋರಿದ ಹಾದಿಯಲ್ಲಿ ಇಂದಿನ ಯುವಸಮೂಹ ಸಾಗಬೇಕಿದೆ, ಶೋಷಿತ ಮತ್ತು ಹಿಂದುಳಿದವರಿಗೆ ಶಿಕ್ಷಣ ಮತ್ತು ಸಂಘಟನೆಯ ಶಕ್ತಿಯನ್ನು ತೋರಿಸುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನೆಡೆಸಬೇಕಾದ ಮಹತ್ವದ ಜವಾಬ್ದಾರಿ ಇದೆ ಎನ್ನುವುದನ್ನು ಅರಿಯಬೇಕು ಎಂದರು.

ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ರಾಜ್ಯದ ದಲಿತರ ಪಾಲಿಗೆ ಪ್ರೊ.ಬಿ.ಕೃಷ್ಣಪ್ಪ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಪ್ರಭಾವ ಬೀರಿದ ಮಹಾನ್ ನಾಯಕ, ಚಂದ್ರಗುತ್ತಿ ರಾಜ್ಯದಲ್ಲಿ ಅನೇಕ ಅನಿಷ್ಠ ಆಚರಣೆಗಳನ್ನು ನಿಲ್ಲಿಸಲು ದಲಿತ ಸಂಘರ್ಷ ಸಮಿತಿ ಹಾಗೂ ಪ್ರೊ.ಬಿ.ಕೃಷ್ಣಪ್ಪ ಕಾರಣ ಎಂದರು.

ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಸಮೀಕ್ಷೆಯನ್ನು ನಡೆಸುತ್ತಿರುವುದರ ಬೆನ್ನಲ್ಲೆ ಹೊಸದಾಗಿ ಜಾತಿಗಣತಿಯನ್ನು ನಡೆಸಲು ತೀರ್ಮಾನಿಸಿದೆ. ಒಳಮೀಸಲಾತಿ ಗಣತಿ ಈಗಾಗಲೇ ಬಹುತೇಕ ಮುಗಿಯುವ ಹಂತದಲ್ಲಿ ಇರುವುದರಿಂದ ಮೊದಲು ಒಳಮೀಸಲಾತಿಯನ್ನು ನೀಡಿದ ಬಳಿಕ ಜಾತಿಗಣತಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಂ ರಾಜ್ಯ ಪ್ರಶಸ್ತಿಪುರಸ್ಕೃತರಾದ ಎನ್.ವೆಂಕಟೇಶ್, ಪ್ರೊ.ಕೆ.ದೊರೈರಾಜು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆಂಚಮಾರಯ್ಯ, ನಗರಸಭಾ ಮಾಜಿ ಅಧ್ಯಕ್ಷ ವಾಲೆಚಂದ್ರಯ್ಯ, ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಹನುಮಂತರಾಯಪ್ಪ, ಟೂಡಾ ಮಾಜಿ ಸದಸ್ಯ ಜಯಮೂರ್ತಿ, ಜಿ.ಪಂ. ಸಿಎಒ ನರಸಿಂಹಮೂರ್ತಿ, ಹೋರಾಟಗಾರ ನರಸಿಂಹಯ್ಯ, ನಾಗಾರ್ಜುನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವನಂಜಪ್ಪ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular