ನಿವೃತ್ತ ಪ್ರಾಂಶುಪಾಲ ಹಾಗೂ ಕವಿ ಎನ್. ನಾಗಪ್ಪ ಶನಿವಾರ ಬೆಳಗ್ಗೆ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದರು. ನಂತರ ನಾಗಪ್ಪ ಅವರ ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತರಲಾಯಿತು. ವಿಷಯ ತಿಳಿದ ನಾಗಪ್ಪ ಒಡನಾಡಿಗಳು ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಜನಪರ ಚಿಂತಕ ಕೆ.ದೊರೈರಾಜ್ ಎನ್.ನಾಗಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ದಿನ್ಯೂಸ್ ಕಿಟ್.ಕಾಂ ಜೊತೆ ಮಾತನಾಡಿದ ದೊರೈರಾಜ್, ನನ್ನ ಮತ್ತು ಅವರ ನಡುವಿನ ಸ್ನೇಹ 50 ವರ್ಷಗಳದ್ದು. ಸಾಧುಸ್ವಭಾವದ ಅವರು ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.
ಲೇಖಕ ಎಂ.ಎಚ್.ನಾಗರಾಜ್ ಅವರು ಎನ್. ನಾಗಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಸುರಿಗೇನಹಳ್ಳಿ ನಾಗಪ್ಪ ವಿಧಿವಶರಾಗಿದ್ದಾರೆ. ಗುಬ್ಬಿ ತಾಲ್ಲೂಕು ಮೂಲದ ಎನ್ ನಾಗಪ್ಪ ಕನ್ನಡ ಸ್ನಾತಕೋತ್ತರ ಪದವೀಧರರು. ಪಿಯು ಕಾಲೇಜು ಕನ್ನಡ ಅಧ್ಯಾಪಕರು, ವಿಶ್ರಾಂತ ಪ್ರಾಂಶುಪಾಲರು. ದಲಿತ ಚಳವಳಿ, ರೈತ ಚಳವಳಿ, ಬಂಡಾಯ ಸಾಹಿತ್ಯ ಸಂಘಟನೆ ಮತ್ತಿತರ ವೇದಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ಹಲವಾರು ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದರು. ಜೊತೆಗೆ ಒಳ್ಳೆಯ ವಾಗ್ಮಿಗಳು. ಹಾಗೆ ಕವಿ ಕೂಡ. ಆದರೆ ಸಾಹಿತ್ಯ ಕೃಷಿ ಮಾಡಿದ್ದು ಮಾತ್ರ ಕಡಿಮೆ. ಕಾರಣ ಗೊತ್ತಿಲ್ಲ. ಭೇಟಿ ಆದಾಗಲೆಲ್ಲಾ ಬರೆಯಿರಿ, ಏನಾದರೂ ಬರೆಯಿರಿ ಅಂತ ಹೇಳುತ್ತಲೇ ಬಂದೆ. ಹಾಗೆ ಹೇಳಿದ್ದನ್ನು ಬಹು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದರು. ಆದರೆ ಬರವಣಿಗೆಯ ದಾರಿಯಲ್ಲಿ ಮುನ್ನಡೆಯುವ ಮನಸ್ಸು ಮಾಡಲೇ ಇಲ್ಲ ಎಂದಿದ್ದಾರೆ.
ಅವರ ಬರಹಗಳಲ್ಲಿ ಅಧಿಕೃತ, ಪ್ರಾತಿನಿಧಿಕ ಎನ್ನಬಹುದಾದ ಒಂದು ಕೃತಿ “ಸಾಕವ್ವ”. ಅವರ ಕವನಗಳ ಚೊಚ್ಚಲ ಸಂಗ್ರಹ. ಇದೇ ಮೊದಲು ಇದೇ ಕೊನೆ. ಮತ್ತೊಂದು ಕವನ ಸಂಕಲನ ತರಲೇ ಇಲ್ಲ. ಅಂದಹಾಗೆ ಈ ಸಾಕವ್ವ ಕವನ ಸಂಕಲನವನ್ನು ಸುಮಾರು 20 ವರ್ಷಗಳ ಹಿಂದೆ ನಾನು ಪ್ರಕಟಿಸಿದ್ದು ಎಂದು ಹೇಳಿದ್ದಾರೆ.
ತುಮಕೂರು ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಬಿಡುಗಡೆ ಮಾಡಿಸಿದ್ದು ಇದೀಗ ನೆನಪಾಗುತ್ತಿದೆ. ಕವಿ ನಾಗಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದರೆ ಕ್ಲೀಷೆ ಆಗಲಾರದು. ಹೋಗಿಬನ್ನಿ ನಾಗಪ್ಪನವರೇ, ನಿಮಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ.


