Friday, July 18, 2025
Google search engine
Homeಮುಖಪುಟಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ದೇವರಾಜ ಅರಸು-ಸಿಎಂ ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ದೇವರಾಜ ಅರಸು-ಸಿಎಂ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯ ಕಂಡಂತಹ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು. ಬಡವರು, ತುಳಿತಕ್ಕೊಳಗಾದವರು, ಅವಕಾಶಗಳಿಂದ ವಂಚಿತರಾದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 43ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ವಿಧಾನಸೌಧ ಆವರಣದಲ್ಲಿರುವ ಅರಸು ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ದಿವಂಗತ ದೇವರಾಜ ಅರಸು ಅವರ ಪುಣ್ಯತಿಥಿಯಂದು ಸರ್ಕಾರ ಹಾಗೂ ಏಳು ಕೋಟಿ ಕನ್ನಡಿಗರ ವತಿಯಿಂದ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿ ಸ್ಮರಿಸಿದ್ದೇನೆ ಎಂದರು.

ಅರಸು ಅವರಿಂದಾಗಿ ಬಡತನ ನಿರ್ಮೂಲನೆ ಕಾರ್ಯಕ್ರಮ ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ನೆರವೇರಿತು. ರಾಜಕೀಯದಲ್ಲಿ ಅವಕಾಶ ಸಿಗದ ಜನಾಂಗದವರಿಗೆ ಪ್ರಾತಿನಿಧ್ಯ ದೊರಕಿಸಿಕೊಟ್ಟರು. ಹಾವನೂರು ಆಯೋಗವನ್ನು ರಚನೆ ಮಾಡಿ, ಅದರ ವರದಿ ಪಡೆದು ಜಾರಿ ಮಾಡಿ ಉದ್ಯೋಗದಲ್ಲಿ ಮೀಸಲಾತಿ ಕೊಟ್ಟರು ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ದೇವರಾಜ ಅರಸು ಅವರು ನಿರ್ಗತಿಕರು, ಭೂ ರಹಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿ ಭೂರಹಿತರನ್ನು ಭೂ ಒಡೆಯರಾಗಿಸಿದರು. ಜೀತ ಪದ್ಧತಿಯನ್ನು ರದ್ದು ಮಾಡಿ, ಮಲ ಹೊರುವ ಪದ್ಧತಿಯನ್ನು ನಿಲ್ಲಿಸಿದರು. ಅವರ ಕಾರ್ಯಕ್ರಮಗಳ ಉದ್ದನೆಯ ಪಟ್ಟಿಯೇ ಇದೆ. ದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಎಂದರು.

ಮೈಸೂರು ರಾಜ್ಯಕ್ಕೆ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ ಮುತ್ಸದ್ದಿ, ಜನಪರವಾದ ಕಾಳಜಿ, ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿರುವ ರಾಜಕಾರಣಿಯನ್ನು ಸರ್ಕಾರ ಸ್ಮರಿಸಿದೆ. ಅವರು ಮಾಡಿರುವ ಕೆಲಸಗಳು ನಮಗೆ ಸ್ಫೂರ್ತಿ ಮತ್ತು ಪ್ರೇರಣೆ. ನಮ್ಮ ಸರ್ಕಾರ ಅವರಿಂದ ಸ್ಪೂರ್ತಿ ಪಡೆದು ಸಾಮಾಜಿಕ ನ್ಯಾಯಾದೆಡೆಗೆ ದೃಢವಾದ ಹೆಜ್ಜೆಗಳನ್ನು ಇರಿಸಿದ್ದೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular