ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಆ ಗ್ರಾಮದಲ್ಲಿನ ಹಳೆ ವಿದ್ಯಾರ್ಥಿಗಳು, ದಾನಿಗಳು ಹಾಗೂ ಯುವಕರು ಹುಟ್ಟು ಹಬ್ಬ ಹಾಗೂ ಇತರೆ ಆಚರಣೆಗಳಿಗೆ ಮಾಡುವ ದುಂದು ವೆಚ್ಚವನ್ನು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ತೊಡಗಿಸಿಕೊಳ್ಳಬೇಕು ಎಂದು ವಿ.ಎಸ್.ಎಸ್.ಎನ್. ಸಿ.ಇ.ಒ. ನಾಗರಾಜು ಸಲಹೆ ನೀಡಿದರು.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸುದ್ದೇಕುಂಟೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು.
ಇವತ್ತು ಗ್ರಾಮದಲ್ಲಿನ ಕೆಲ ಸ್ನೇಹಿತರು ನನ್ನ ಹುಟ್ಟು ಹಬ್ಬದ ನೆಪದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ನೋಟ್ ಬುಕ್ಸ್ ಉಚಿತವಾಗಿ ನೀಡಲು ಯೋಜನೆ ರೂಪಿಸಿ, ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನಿಜವಾಗಲೂ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸ್ನೇಹಿತರದ್ದು ಯಾವುದೇ ಕಾರ್ಯಕ್ರಮವಾದರೂ ಕೂಡ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಹಾಗೂ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುತ್ತೇವೆ ಎಂದರು.
ಪ್ರಭಾರ ಮುಖ್ಯಶಿಕ್ಷಕ ಬಾಲಕೃಷ್ಣ ಮಾತನಾಡಿ, ವಿದ್ಯೆಗೆ ಸಮನಾದದ್ದು ಯಾವುದು ಇಲ್ಲ. ಸಮಾಜದಲ್ಲಿ ಏನಾದರೂ ಉನ್ನತವಾದದ್ದು ಸಾಧಿಸಬೇಕಾದರೆ ಅದು ವಿದ್ಯೆಯಿಂದ ಮಾತ್ರ. ಆ ವಿದ್ಯೆ ಕಲಿಯುವಂತವರಿಗೆ ಸಮಾಜದಲ್ಲಿ ಕೆಲ ಸಾಮಾಜಿಕ ಬದ್ಧತೆಯುಳ್ಳಂತವರು ತಾನು ಸಮಾಜದಲ್ಲಿ ಸಂಪಾದಿಸಿದ ಹಣದಲ್ಲಿ ಒಂದಷ್ಟು ಸಮಾಜಕ್ಕೆ ದಾನ ಮಾಡುವ ಜನರಿದ್ದಾರೆ ಎಂದು ಹೇಳಿದರು.
ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಹೆಂಜಾರಪ್ಪ, ಗ್ರಾಮಸ್ಥರಾದ ನರಸಿಂಹಮೂರ್ತಿ, ಶಂಕರಪ್ಪ, ರಾಜು, ನಂದೀಶ್, ಹರೀಶ್ ಕುಮಾರ್, ಕೃಷ್ಣ, ಲೋಕೇಶ್, ಬೀರಣ್ಣ, ಎಸ್.ಡಿ. ನಂಜಪ್ಪ, ಅಂಜಯ್ಯ, ತಿಪ್ಪಣ್ಣ, ಜಿ. ರಾಮಾಯ್ಯ, ಮಲ್ಲಯ್ಯ, ಕೆಂಪಯ್ಯ, ಕದರಪ್ಪ, ಲಕ್ಕಣ್ಣ, ನರಸಿಂಹಯ್ಯ, ನಾಗರಾಜು, ನರಸಿಂಹರಾಜು ಇದ್ದರು.


