Friday, July 18, 2025
Google search engine
Homeಮುಖಪುಟ'ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ - ಸರ್ವಪಕ್ಷ ಸದಸ್ಯರ ಸಭೆ ಕರೆಯಿರಿ-ಸುರೇಶ್ ಗೌಡ

‘ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ – ಸರ್ವಪಕ್ಷ ಸದಸ್ಯರ ಸಭೆ ಕರೆಯಿರಿ-ಸುರೇಶ್ ಗೌಡ

‘ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರು ಕಬಳಿಸುವ ಎಕ್ಸ್ಪ್ರೆಸ್ ಕೆನಾಲ್ ಬಕಾಸುರ ಯೋಜನೆಯನ್ನು ರದ್ದು ಮಾಡಬೇಕು. ಮೂಲ ಯೋಜನೆಯ ನಾಲೆ ಮೂಲಕ ಕುಣಿಗಲ್‌ಗೆ ನೀರು ಹರಿಸಬೇಕು, ಎಕ್ಸ್ಪ್ರೆಸ್ ಕೆನಾಲ್ ಮೂಲಕ ವಾಮಮಾರ್ಗದಲ್ಲಿ ನೀರು ಹರಿಸಲು ಬಿಡುವುದಿಲ್ಲ ಎಂದು ಶಾಸಕ ಬಿ.ಸುರೇಶ್‌ಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ಪ್ರೆಸ್ ಕೆನಾಲ್ ಸಂಬಂಧದ ತಾಂತ್ರಿಕ ಸಮಿತಿ ವರದಿ ಬಗ್ಗೆ ಚರ್ಚೆ ನಡೆಸಲು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಸರ್ವ ಸದಸ್ಯರ ಸಭೆ ಕರೆಯಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದರು. ಎಕ್ಸ್ಪ್ರೆಸ್ ಕೆನಾಲ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಡಾ.ಜಿ.ಪರಮೇಶ್ವರ್ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕುಣಿಗಲ್‌ಗಾಗಲಿ, ಮಾಗಡಿಗಾಗಲಿ ನೀರು ನೀರು ತೆಗೆದುಕೊಂಡು ಹೋಗಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ ಅವೈಜ್ಞಾನಿಕವಾದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಬೇಡ. ಲಿಂಕ್ ಕೆನಾಲ್ ಯೋಜನೆಯಿಂದ ಹೇಮಾವತಿ ನೀರು ಅವಲಂಬಿತ ಜಿಲ್ಲೆಯ 9 ತಾಲ್ಲೂಕುಗಳಿಗೆ ಹನಿ ನೀರೂ ಹರಿಯುವುದಿಲ್ಲ ಎಂದರು.
ಮೂಲ ಯೋಜನೆ ನಾಲೆಯಿಂದ ಕುಣಿಗಲ್‌ಗೆ ನೀರು ಹರಿಯುವುದಿಲ್ಲ. ಹಾಗಾಗಿ ಎಕ್ಸ್ಪ್ರೆಸ್ ಕೆನಾಲ್ ಎಂದು ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ಕುಣಿಗಲ್‌ಗೆ ನೀರು ಹರಿಸಬೇಕೆಂದು ಸಾವಿರ ಕೋಟಿ ರೂ.ವೆಚ್ಚ ಮಾಡಿ ಹೇಮಾವತಿ ನಾಲೆಯನ್ನು ಆಧುನಿಕರಣ ಮಾಡಲಾಗಿದೆ. ಇಷ್ಟಾಗಿಯೂ ನೀರು ಹರಿಯದಿದ್ದರೆ ಯಾರು ಹೊಣೆ? ನಾಲೆ ಆಧುನಿಕರಣ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ, ಜನರ ತೆರಿಗೆ ದುಡ್ಡು ಪೋಲು ಮಾಡಬೇಡಿ ಎಂದರು. ಸಚಿವ ಡಾ.ಪರಮೇಶ್ವರ್ ಅವರು ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಮಾತನಾಡಬಾರದು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ಮಾತನಾಡಬೇಕು ಹಾಗೂ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರು ನೀರಿನ ರಾಜಕಾರಣ ಮಾಡುತ್ತಿಲ್ಲ. ಇದು ಪಕ್ಷಾತೀತ ಹೋರಾಟ. ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ತಾರ್ಕಿಕ ಅಂತ್ಯ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ. ಹೆದರಿಸಿ, ಬೆದರಿಸಿ, ಪೊಲೀಸ್ ಕೇಸ್ ಹಾಕಿಸಿ ಹೋರಾಟ ತಡೆಯಲು ಸಾಧ್ಯವಿಲ್ಲ. ಹೋರಾಟ ತೀವ್ರವಾಗುತ್ತದೆ. ಗುಬ್ಬಿ ಬಂದ್, ಜಿಲ್ಲೆ ಬಂದ್ ಮಾಡುತ್ತೇವೆ, ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ, ಸರ್ಕಾರ ಬೀಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಸ್.ರವಿಶಂಕರ್ ಹೆಬ್ಬಾಕ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಮುಖಂಡರಾದ ದಿಲೀಪ್‌ಕುಮಾರ್, ಬ್ಯಾಟರಂಗೇಗೌಡ, ಚಂದ್ರಶೇಖರ ಬಾಬು, ಎಸ್.ಆರ್.ಗೌಡ, ಭೈರಪ್ಪ, ಯೋಗಾನಂದ ಕುಮಾರ್ ಸೇರಿದಂತೆ ಹಲವಾರು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular