ಆಂಧ್ರ ಪ್ರದೇಶದ ತೀರ್ಥಯಾತ್ರೆ ಮುಗಿಸಿ ವಾಪಸಾಗುವ ವೇಳೆ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಹಾರಿಹೋಗಿ ಪಕ್ಕದ ಹಳ್ಳಕ್ಕೆ ಬಿದ್ದ ಪರಿಣಾಮ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಪಯಾಪಿಲಿ ಮಂಡಲದ ಪೊದೊಡ್ಡಿ ಗ್ರಾಮದ ಬಳಿ ಟೊಯೊಟಾ ಇನ್ನೋವಾ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ಮೂವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ (43), ಬಿಜೆಪಿ ಯುವ ಮೋರ್ಚ ತಾಲೂಕು ಮಾಜಿ ಅಧ್ಯಕ್ಷ ಸಂತೋಷ್ (37) ಹಾಗೂ ಲೋಕೇಶ್ (37) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ನೇಹಿತರಾಗಿದ್ದು, ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ದರ್ಶನ್, ಶಶಿಕುಮಾರ್, ನಡುವನಹಳ್ಳಿ ಶಿವಾನಂದ್ ಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂತ್ರಾಲಯ, ಶ್ರೀಶೈಲ ಮತ್ತು ಮಹಾನಂದಿ ದೇವಸ್ಥಾನಗಳಿಗೆ ಭೇಟಿ ನೀಡಿ ತುಮಕೂರಿಗೆ ವಾಪಸ್ಸಾಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.
ಮೃತರು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಆಪ್ತರು ಎಂದು ಹೇಳಲಾಗಿದ್ದು, ಜೆಸಿಎಂ ಮಗ ಡಾ.ಅಭಿಜ್ಞಾ, ತಾಪಂ ಮಾಜಿ ಅಧ್ಯಕ್ಷ ವಸಂತಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಕೆಎಂಎಲ್ ಕಿರಣ್, ಬರಕನಹಾಲ್ ವಿಶ್ವನಾಥ್, ಬರಗೂರು ಕಿರಣ್ ಸೇರಿದಂತೆ ಅನೇಕರು ಭಾನುವಾರ ರಾತ್ರಿಯೇ ಕರ್ನೂಲ್ ಬಳಿಯ ಘಟನಾ ಸ್ಥಳಕ್ಕೆ ಧಾವಿಸಿ ಕಾನೂನು ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್ ಕರ್ನೂಲ್‌ಗೆ ಧಾವಿಸಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ.
ಕರ್ನೂಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


