ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದುಷ್ಕೃತ್ಯವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.
ತುಮಕೂರು ನಗರದಲ್ಲಿ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಿಂಧು ನದಿಯ ನೀರನ್ನು ಕೊಡಬೇಕು ಎಂದರೆ ಕಾಶ್ಮೀರದಲ್ಲಿ ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳನ್ನು ಪಾಕಿಸ್ತಾನ ತಕ್ಷಣ ನಿಲ್ಲಿಸಬೇಕು. ಪಾಕಿಸ್ತಾನದ ಬೆದರಿಕೆಗೆ ಭಾರತ ಜಗ್ಗುವುದಿಲ್ಲ, ನಮ್ಮ ವೀರ ಯೋಧರು ಬಗ್ಗುವುದಿಲ್ಲ. ಪಾಕಿಸ್ತಾನದ ಸೈನಿಕರನ್ನು ಮಟ್ಟ ಹಾಕುವ ಶಕ್ತಿ ನಮ್ಮ ದೇಶದ ವೀರ ಯೋಧರಿಗಿದೆ ಎಂದರು.
ಇನ್ನು ಮುಂದಾದರೂ ಭಯೋತ್ಪಾದನೆ ಕುಮ್ಮಕ್ಕು ನೀಡುವ ದುಷ್ಕೃತ್ಯವನ್ನು ಪಾಕಿಸ್ತಾನ ನಿಲ್ಲಿಸಬೇಕು. ಏನಾದರೂ ಒಂದು ಸಣ್ಣ ಘಟನೆ ನಡೆದರೂ ಭಾರತ ಪಾಕಿಸ್ತಾನದ ಯುದ್ಧ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
26 ತಾಯಂದಿರ ಸಿಂಧೂರ ಅಳಿಸಿದ ದುಷ್ಟ ಉಗ್ರಗಾಮಿಗಳ ಸಂಘಟನೆಗಳನ್ನು ನಾಶಪಡಿಸಲು ಆಪರೇಷನ್ ಸಿಂಧೂರ ಘೋಷಣೆ ಮಾಡಿ ವೀರ ಯೋಧರ ಮೂಲಕ ರಾತ್ರೋರಾತ್ರಿ ಪಾಕಿಸ್ತಾನದ ಉಗ್ರಗಾಮಿಗಳ ನೆಲೆಗಳನ್ನು ಧ್ವಂಸ ಮಾಡಿದರು. ಪಾಕಿಸ್ತಾನದಲ್ಲಿ ನೂರಾರು ಕಿಲೋ ಮೀಟರ್‌ಗಟ್ಟಲೆ ನಮ್ಮ ಕ್ಷಿಪಣಿಗಳು ದಾಳಿ ಮಾಡಿ ಉಗ್ರಗಾಮಿಗಳ ನೆಲೆಗಳನ್ನು ವೀರ ಯೋಧರು ಧ್ವಂಸಗೊಳಿಸಿದ್ದಾರೆ. ನೂರಾರು ದುಷ್ಟ ಉಗ್ರಗಾಮಿಗಳನ್ನು ಏರ್‌ಸ್ಟ್ರೈಕ್ ಮೂಲಕ ಹತ್ಯೆ ಮಾಡಲಾಗಿದೆ ಎಂದರು.
ಅಮೆರಿಕಾ ಮತ್ತು ಭಾರತದ ಹಿಟ್ ಲಿಸ್ಟ್ನಲ್ಲಿದ್ದ ಉಗ್ರಗಾಮಿಗಳನ್ನು ಹತ್ಯೆ ಮಾಡುವಲ್ಲಿ ಭಾರತದ ವೀರ ಯೋಧರು ಯಶಸ್ವಿಯಾಗಿದ್ದಾರೆ. ಹಾಗಾಗಿ ಆಪರೇಷನ್ ಸಿಂಧೂರ್ ಯಶಸ್ವಿಯಾಗಿರುವ ಸಂದರ್ಭದಲ್ಲಿ ನಮ್ಮ ವೀರ ಯೋಧರನ್ನು ಬೆಂಬಲಿಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆಪರೇಷನ್ ಸಿಂಧೂರ ಯಶಸ್ವಿಗೆ ಕಾರಣಕರ್ತರಾಗಿರುವ ವೀರ ಯೋಧರಿಗೆ ಬೆಂಬಲ, ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದರು.