ಭಾರತದ ಸೈನ್ಯ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿ, ಪಾಕಿಸ್ತಾನದ ಉಗ್ರರನ್ನು ಮತ್ತು ಉಗ್ರರ ನೆಲೆಗಳನ್ನು ನಾಶಪಡಿಸಿ, ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದೆ. ಇದಕ್ಕಾಗಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುವುದಾಗಿ ಆಮ್ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಪ್ರತ್ಯುತ್ತರ ನೀಡಿ ಉಗ್ರರ ದಾಳಿಯಲ್ಲಿ ಮಡಿದ ಜನರ ಆತ್ಮಕ್ಕೆ ಶಾಂತಿ ದೊರಕಿಸಿದೆ ಎಂದರು.
ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನವು ಸದಾ ಕುತಂತ್ರ ಬುದ್ಧಿಯನ್ನು ಅನುಸರಿಸುತ್ತಾ ಬಂದಿದೆ. ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ದೇಶದ ಆಡಳಿತವನ್ನು ನಡೆಸದೆ, ಉಗ್ರವಾದ ಮತ್ತು ಅರಾಜಕತೆಯ ಮೂಲಕ ಜನರ ಜೀವನದ ಜೊತೆ ಆಟವಾಡುತ್ತಾ ಕಾಲಹರಣ ಮಾಡುತ್ತಿದೆ. ಇದು ಸಲ್ಲದು, ಭಾರತದ ಮೃದುತ್ವನ್ನು ಬಂಡವಾಳವನ್ನಾಗಿಸಿಕೊಳ್ಳಲು ಹೊರಟ ಪಾಕಿಸ್ತಾನ ಮತ್ತು ಉಗ್ರರಿಗೆ ಭಾರತದ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಸಂದರ್ಭದಲ್ಲಿ ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಸಹ ದೇಶವೇ ಮೊದಲು ಎಂಬ ಅಂಶವನ್ನು ಘಟನೆಯ ನಂತರ ಎಲ್ಲರು ಒಗ್ಗೂಡಿ ಪ್ರತ್ಯುತ್ತರ ನೀಡುವ ಮೂಲಕ ತೋರಿಸಿಕೊಟ್ಟಿದ್ದೇವೆ. ಅದೇ ರೀತಿ ಆಮ್ಆದ್ಮಿ ಪಾರ್ಟಿಯೂ ರಾಜಕೀಯವನ್ನು ಬದಿಗಿಟ್ಟು ದೇಶ ಮತ್ತು ಸೈನಿಕರ ಪರವಾಗಿ ನಿಂತಿದೆ. ಭವ್ಯ ಭಾರತದ ಸೈನಿಕರು ಮತ್ತು ಸೈನಿಕರ ಕುಟುಂಬಗಳನ್ನು ಆಮ್ಆದ್ಮಿ ಪಾರ್ಟಿಯು ಆತ್ಮೀಯವಾಗಿ ಅಭಿನಂದಿಸುತ್ತಾ ಸದಾ ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ನಮ್ಮ ದೇಶದ ಮೂರು ಪ್ರಮುಖ ಶಕ್ತಿಗಳಾದ ರೈತರು, ಸೈನಿಕರು ಮತ್ತು ಶ್ರಮಿಕ ವರ್ಗ ಸೇರಿದಂತೆ ಎಲ್ಲಾ ಕಾರ್ಮಿಕರು ದೇಶದ ಬೆನ್ನೆಲುಬುಗಳು. ಸೈನಿಕರು ದೇಶದ ಗಡಿ ಕಾಯ್ದರೆ, ರೈತರ ಅನ್ನ ಬೆಳೆದು ನೀಡಿ ದೇಶವನ್ನು ಸಂರಕ್ಷಿಸುತ್ತಾರೆ. ಹಾಗೆಯೇ ಕಾರ್ಮಿಕರು ದುಡಿಯುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹಾಗಾಗಿ ಈ ಮೂರು ವರ್ಗಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎನ್. ರಾಮಾಂಜನಪ್ಪ, ರೈತ ಘಟಕದ ಬಿ.ಆರ್.ಯೋಗೀಶ್, ಕರಿಗೌಡ, ಮಾಧ್ಯಮ ಉಸ್ತುವಾರಿ ಪ್ರಭುಸ್ವಾಮಿ, ಮುಂಖಂಡರುಗಳಾದ ಪ್ರಕಾಶ್, ತಿಮ್ಮಪ್ಪ, ಹೆಚ್.ಬಿ.ಶಿವಲಿಂಗಯ್ಯ, ನಾಗಭೂಷಣ್, ಕೆಂಪನಹಳ್ಳಿ ಕುಮಾರ್, ಬಸವರಾಜು, ಚರಣ್ ಇದ್ದರು.