Thursday, January 29, 2026
Google search engine
Homeಮುಖಪುಟತಪ್ಪನ್ನು ಒಪ್ಪಿಕೊಳ್ಳುವ ಗುಣ ಬುದ್ದನಲ್ಲಿ ಇತ್ತು-ಅಗ್ರಹಾರ ಕೃಷ್ಣಮೂರ್ತಿ

ತಪ್ಪನ್ನು ಒಪ್ಪಿಕೊಳ್ಳುವ ಗುಣ ಬುದ್ದನಲ್ಲಿ ಇತ್ತು-ಅಗ್ರಹಾರ ಕೃಷ್ಣಮೂರ್ತಿ

ಪ್ರಪಂಚದಲ್ಲಿ ಬುದ್ದನಷ್ಟು ಪ್ರಜಾಪ್ರಭುತ್ವವಾದಿ ಮತ್ತೊಬ್ಬರಿಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಗುಣ ಆತನಲ್ಲಿ ಇತ್ತು ಎಂದು ಸಾಹಿತ್ಯ ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದ್ದಾರೆ.

ತುಮಕೂರು ನಗರದ ಏಂಪ್ರೆಸ್‌ ಕೆಪಿಎಸ್ ಶಾಲೆಯ ಕೆ.ಪಿ.ಪೊರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಬುದ್ದ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕೆ.ಬಿ.ಸಿದ್ದಯ್ಯ ಮತ್ತು ವೀಚಿ ಕನ್ನಡಕ್ಕೆ ಅನುವಾದಿಸಿರುವ ಸಖೀಗೀತ ಪ್ರಕಾಶನ ಹೊರತಂದಿರುವ“ನಾಲ್ಕು ಶ್ರೇಷ್ಠ ಸತ್ಯಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆತ ಪ್ರವಚನ ನೀಡುವ ಸಂದರ್ಭದಲ್ಲಿ ಒಳ್ಳೆಯದನ್ನು ಯಾರೇ ಹೇಳಿದರೂ ಅದನ್ನು ಸ್ವೀಕರಿಸುವ ಮಹತ್ವದ ಗುಣವನ್ನು ಹೊಂದಿದ್ದ, ಆತನ ಗುಣಕ್ಕೆ ಪಂಡಿತರು ಮಾರು ಹೋಗಿ ಬುದ್ದನನ್ನು ಅನುಸರಿಸುತಿದ್ದರು ಎಂದರು.

22ನೇ ಶತಮಾನದಲ್ಲಿ ಜನರು ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬ ಮಾನಸಿಕ ತೊಳಲಾಟದಲ್ಲಿ ಇದ್ದಾರೆ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೇ, ಇತರರನ್ನು ಅರ್ಥೈಸಲು ಹೋಗುತ್ತಿರುವುದು ದುರಂತ.ಸಾವು, ನೋವು, ದುಃಖವನ್ನು ಎದುರಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಬುದ್ದ 2500 ವರ್ಷಗಳ ಹಿಂದೆ ಸಾವು, ನೋವು, ದುಃಖಗಳನ್ನು ಎದುರುಗೊಳ್ಳುವುದು ಹೇಗೆ ಎಂಬುದನ್ನು ತನ್ನ ಪ್ರವಚನಗಳ ಮೂಲಕ ತಿಳಿಸಿ, ಇವೆಲ್ಲವೂ ಸರ್ವವ್ಯಾಪ್ತಿ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿದ್ದ ಎಂದು ತಿಳಿಸಿದರು.

ಬುದ್ದನಿಗೂ, ವಚನಕಾರರಿಗೂ ಸಾಮ್ಯತೆ ಇರುವುದನ್ನು ಕಾಣಬಹುದು. ಬುದ್ದ 2500 ವರ್ಷಗಳ ಹಿಂದೆಯೇ ಹೇಳಿದ್ದನ್ನು ವಚನಕಾರರು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ವಚನದ ಮೂಲಕ ಹೇಳಿದ್ದಾರೆ. ಈ ಕುರಿತು ಹಲವು ಸಂಶೋಧನೆಗಳು ನಡೆದು ವಚನಕಾರರ ಮೇಲೆ ಬುದ್ದಗುರುವಿನ ಪ್ರಭಾವ ಇರುವುದನ್ನು ಕಾಣಬಹುದಾಗಿದೆ ಎಂದರು.

ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಮಾತನಾಡಿ, ಕೆ.ಬಿ.ಸಿದ್ದಯ್ಯನವರು ನನಗೆ ಪಾಠ ಹೇಳಿದ ಗುರುಗಳು, ವೀಚಿ ಅವರು ನಾನು ಪದವಿ ವ್ಯಾಸಾಂಗಕ್ಕೆ ಸಹಕರಿಸಿದ ಮತ್ತೊಬ್ಬ ಗುರುಗಳು.ಇವರಿಬ್ಬರು ಅನುವಾದಿಸಿರುವ ಭಗವಾನ್ ಬುದ್ದನ ಕುರಿತ ಪಾಶ್ಚಿಮಾತ್ಯ ಬುದ್ದನ ಅನುಯಾಯಿಯೊಬ್ಬರು ರಚಿಸಿರುವ ನಾಲ್ಕು ಶ್ರೇಷ್ಠ ಸತ್ಯಗಳು ಕೃತಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ.ಹುಟ್ಟಿದ ದಿನದಿಂದಲೇ ಸಾವು ಖಚಿತ ಎಂಬ ಸತ್ಯವನ್ನು ಅರ್ಥೈಸುವುದನ್ನು ನಾವು ಕಲಿತುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ ತುಂಬಾಡಿ ರಾಮಯ್ಯ ಮಾತನಾಡಿ, ಬುದ್ದ ತುಮಕೂರಿಗೆ ಬಂದಿದ್ದು ಕೆ.ಬಿ.ಸಿದ್ದಯ್ಯನವರ ಮೂಲಕ. ಬುದ್ದನ ಬಗ್ಗೆ ಕೆ.ಬಿ.ಸಿದ್ದಯ್ಯ ಸದಾ ಮಾತನಾಡುವುದನ್ನು ನೋಡಿದ ನಮ್ಮೆಲ್ಲರ ಹಿರಿಯರಾದ ಕೆ.ಎಂ.ಶಂಕರಪ್ಪ ಅವರು ಪಾಶ್ಚಿಮಾತ್ಯ ಲೇಖಕ ಬರೆದಿರುವ ಈ ಪುಸ್ತಕವನ್ನು ತಂದು, ಕನ್ನಡಕ್ಕೆ ಅನುವಾದಿಸುವಂತೆ ಸಲಹೆ ನೀಡಿದರು. ಅದನ್ನು ಪಾಲಿಸಿದ ಕೆ.ಬಿ.ಸಿದ್ದಯ್ಯ ಮತ್ತು ವೀಚಿ ಅವರು, 31 ವರ್ಷಗಳ ಹಿಂದೆ ಬಿಡುಗಡೆ ಮಾಡಿಸಿದ್ದರು. ಇಂದು ಅದೇ ಪುಸ್ತಕ ಬುದ್ದ ಪೂರ್ಣೀಮೆಯಂದು ಮರುಮುದ್ರಣಗೊಂಡು ಬಿಡುಗಡೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ,ಟಿ.ಸಿ,ವಿಸ್ಮಯ ವೀ ಚಿಕ್ಕವೀರಯ್ಯ, ನವೀನ್ ಪೂಜಾರಹಳ್ಳಿ, ಡಾ.ನರಸಿಂಹಮೂರ್ತಿ ಹಳೆಕಟ್ಟೆ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular