Thursday, January 29, 2026
Google search engine
Homeಮುಖಪುಟಎರಡು ತಿಂಗಳಲ್ಲಿ ಒಳಮೀಸಲಾತಿ ಆದೇಶ ಪ್ರಕಟ-ಸಿಎಂ

ಎರಡು ತಿಂಗಳಲ್ಲಿ ಒಳಮೀಸಲಾತಿ ಆದೇಶ ಪ್ರಕಟ-ಸಿಎಂ

ಚುನಾವಣಾ ಪ್ರಣಾಳಿಕೆಯಲ್ಲಿ  ಘೋಷಿಸಿದ್ದಂತೆ ಒಳ‌ಮೀಸಲಾತಿ ಜಾರಿಗೆ ನಾವು ಬದ್ದ. ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದಕ್ಕಾಗಿ ಸೋಮವಾರದಿಂದ ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹ ನಡೆಯಲಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ತಿಂಗಳೊಳಗಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವ ಆದೇಶ ಪ್ರಕಟಿಸಲಿದೆ ಎಂದು ಹೇಳಿದರು.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲಾಗಿದೆ. ಈ ಸಮಿತಿ ನೀಡಿರುವ ಮಧ್ಯಂತರ ವರದಿಯ ಶಿಫಾರಸು ಆಧರಿಸಿ ಸಮೀಕ್ಷೆ ನಡೆದಿದೆ ಎಂದು ಹೇಳಿದರು.

ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ. 2011ರ ಜನಗಣತಿ ಆಧಾರದಲ್ಲಿ ಸದಾಶಿವ ಆಯೋಗ ಪರಿಶಿಷ್ಟ  ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಗುರುತಿಸಿತ್ತು. 1-8-2024 ರಲ್ಲಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಪರವಾಗಿ ನೀಡಿರುವ ಆದೇಶದಂತೆ ನಾವು ಮುಂದುವರೆದೆವು ಎಂದರು.

ಆದಿ ದ್ರಾವೀಡ, ಆದಿ ಕರ್ನಾಟಕ, ಆದಿ ಆಂಧ್ರ  ಸಮುದಾಯದಲ್ಲಿ ಯಾರು ಎಷ್ಟು ಮಂದಿ ಇದ್ದಾರೆ ಎನ್ನುವುದು ಖಚಿತವಾಗಿ ಗೊತ್ತಾಗಬೇಕಿದೆ. ಎಡಗೈ ಸಮುದಾಯ, ಬಲಗೈ ಸಮುದಾಯ ಎಷ್ಟಿದೆ ಎನ್ನುವುದು ವೈಜ್ಞಾನಿಕವಾಗಿ ತಿಳಿಯಬೇಕಿದೆ.  101 ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕೊಡುವಾಗ ನಿರ್ದಿಷ್ಟ ಅಂಕಿ ಅಂಶಗಳು ಬೇಕಾಗುತ್ತವೆ. ಇವತ್ತಿನಿಂದ 17 ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವ ಕೆಲಸ ಆಗ್ತದೆ. ಸುಮಾರು 65 ಸಾವಿರ ಶಿಕ್ಷಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರ್ತಾರೆ. ಮನೆ ಮನೆ ಭೇಟಿ ಕೊಡುವ ಜೊತೆಗೆ, ಮೊದಲ ಹಂತದಲ್ಲಿ 5-5-25 ರಿಂದ 17-5-2025

19-5-2025 ರಿಂದ 21-5-2025 ರವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಮೀಕ್ಷೆ ನಡೆಯುತ್ತದೆ. ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಸೇರಿಸಬಹುದು ಎಂದು ಹೇಳಿದರು.

ಮೂರನೇ ಹಂತದಲ್ಲಿ 19-5-2025 ರಿಂದ 22-5-2025 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು ಎಂದರು. ನಿಖರ ದತ್ತಾಂಶ ಸಂಗ್ರಹಿಸಿದ ಮೇಲೆ ನಮಗೆ ಶಿಫಾರಸ್ಸು ಮಾಡ್ತಾರೆ. ಒಟ್ಟು 60 ದಿನ ಸಮಯಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಎನಾಬಲ್ ಮಾಡಲಾಗಿರುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯಾರೂ ತಪ್ಪಿಸಬಾರದು.  ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ವರದಿ ಜಾರಿ ಬಗ್ಗೆ ಘೋಷಣೆ ಮಾಡಿದ್ದೆವು. ಒಳ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್ ಕೂಡ ಹೇಳಿದೆ. ಸಮುದಾಯದ ಸಂಘಟನೆಗಳು, ಮುಖಂಡರಿಗೂ ನಾವು ಒಳ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದೆವು.   ಆದ್ದರಿಂದ ದತ್ತಾಂಶ ಸಂಗ್ರಹ ಸಮೀಕ್ಷೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಮಾಹಿತಿ ಕೊಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.  ಎಲ್ಲಾ ಸಂಘಟನೆಗಳೂ ಇದಕ್ಕೆ ಸಹಕರಿಸಿ ಎಂದೂ ಸಿಎಂ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular