ಸಂವಿಧಾನ ಇರುವುದರಿಂದಲೇ ನಾವೆಲ್ಲಾ ಸ್ವತಂತ್ರವಾಗಿ ಮಾತನಾಡುವಂತಹ ಮತ್ತು ಬರೆಯುವಂತಹ ಶಕ್ತಿ ಬಂದಿದೆ. ಇದನ್ನು ನಮ್ಮ ಸಂವಿಧಾನ ಕೊಟ್ಟಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇದನ್ನು ನಿಲ್ಲಿಸುತ್ತಿದ್ದಾರೆ. ಪ್ರಧಾನಿ ವಿರುದ್ಧ ಮಾತನಾಡುವವರ ಮೇಲೆ ಎಫ್ಐಆರ್ ಹಾಕಿ ಜೈಲು ಪಾಲಾಗುವಂತೆ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ಮಾಡಿದರು.
ಧಾರವಾಡದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಆಗಬೇಕಾದರೆ ಜನಗಣತಿ ಆಗಬೇಕು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜನಗಣತಿ ಮಾಡುವಂತೆ ನಾನು ಮತ್ತು ರಾಹುಲ್ ಗಾಂಧಿಯವರು ಸಾಕಷ್ಟು ಬಾರಿ ಹೇಳಿದ್ದೇವೆ. ಈ ಮಾತನನ್ನು ಪ್ರಧಾನಿ ನರೇಂದ್ರ ಮೋದಿ ಈಗ ಗಣನೆಗೆ ತೆಗೆದುಕೊಂಡಿದ್ದಾರೆ. ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ ಮಾಡಬೇಕು ಎಂದು ನಾವು ಹೇಳಿದೆವು. ಇದಕ್ಕೆ ಕಾಂಗ್ರೆಸ್ ಜನರ ಒಗ್ಗಟ್ಟನ್ನು ಒಡೆಯುತ್ತಿದೆ. ಬಾಯಿಗೆ ಬಂದಂತೆ ರಾಹುಲ್ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದರು. ಈಗ ಏಕೆ ನಮ್ಮ ಒತ್ತಾಯವನ್ನು ಒಪ್ಪಿಕೊಂಡಿರಿ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆ ಗಗನಕ್ಕೆ ಏರುತ್ತಿದೆ. ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಯೂ ಏರಿಕೆ ಆಗಿದೆ. ಕಬ್ಬಿಣದ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದರೂ ಕರ್ನಾಟಕದ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಇದು ಬೂಟಾಟಿಕೆಯ ಯಾತ್ರೆಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಸಂವಿಧಾನ ಉಳಿಸಲು ಇಂತಹ ಹೋರಾಟ ನಡೆಸುತ್ತಿದ್ದೇವೆ. ಕಾಂಗ್ರೆಸ್ ಜನಪರವಾಗಿ ಕೆಲಸ ಮಾಡುತ್ತದೆ. 2028ಕ್ಕೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.


