ಆಡುವುದೊಂದು ಮಾಡುವುದೊಂದು ಆದರೆ ಅಂತಹ ವ್ಯಕ್ತಿಯನ್ನು ಸಮಾಜ ಗೌರವಿಸುವುದಿಲ್ಲ. ಮಾತು ಕೃತಿಗೆ ಬಂದಾಗಲೇ ವ್ಯಕ್ತಿ ಶ್ರೇಷ್ಠನೆನಿಸಿಕೊಳ್ಳುವುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಅಧ್ಯಯನ ಪೀಠ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿ ಆವರಣದಲ್ಲಿರುವ ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.
ಬಸವಣ್ಣ ಮೊದಲಾದ ಮಹಾತ್ಮರನ್ನು ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸಬಾರದು. ಅವರ ತತ್ವಗಳ ಸ್ಮರಣೆ ಜಯಂತಿಗಳಿಗೂ ಸೀಮಿತವಾಗಬಾರದು ಎಂದು ಹೇಳಿದರು.
ಕಾಯಕವೇ ಕೈಲಾಸ ತತ್ವವೊಂದನ್ನು ಅಳವಡಿಸಿಕೊಂಡರೆ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜ ಸುಧಾರಣೆಯ ಪ್ರಕ್ರಿಯೆ ವಿಶ್ವವಿದ್ಯಾನಿಲಯಗಳಿಂದ ಆರಂಭವಾಗಬೇಕು ಎಂದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಸಮಾನತೆಯ ಹರಿಕಾರ ಬಸವಣ್ಣ ಹನ್ನೆರಡನೆಯ ಶತಮಾನದಲ್ಲೇ ಮಹಿಳಾ ಸಬಲೀಕರಣದ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದವರು. ಗುಡಿಯಲ್ಲಿದ್ದ ದೇವರನ್ನು ಅಂಗೈಗಳಿಗೆ ತಂದಿಟ್ಟವರು ಎಂದರು.
ಬಸವೇಶ್ವರ ಅಧ್ಯಯನ ಪೀಠದ ಸಂಚಾಲಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಸವಣ್ಣ ನೀಡಿದ ಕೊಡುಗೆ ಅಪಾರ. ಸಮಾಜದ ಅಂಚಿನ ಸಮುದಾಯಗಳನ್ನು ಅವರು ಮುಖ್ಯವಾಹಿನಿಗೆ ತಂದು ಶರಣಧರ್ಮವನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಆಧ್ಯಾತ್ಮದ ಅರಿವನ್ನು ಕೊಡುವುದಕ್ಕಾಗಿ ಬಸವಣ್ಣ ಅನುಭವ ಮಂಟಪ ಸ್ಥಾಪಿಸಿದರು. ಮಹಿಳೆಯರಿಗೂ ಭಾಗವಹಿಸಲು ಅವಕಾಶ ನೀಡಿದರು. ಅವರು ಕೊಟ್ಟ ಕಾಯಕತತ್ವ, ಸಹಪಂಕ್ತಿ ಭೋಜನ, ಕಲ್ಯಾಣರಾಜ್ಯ, ಜಂಗಮದ ಪರಿಕಲ್ಪನೆ, ಕಂದಾಚಾರಗಳ ವಿರೋಧ ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ. ಪಿ. ಪರಮಶಿವಯ್ಯ, ಡಾ. ಹೆಚ್. ಕೆ. ಶಿವಲಿಂಗಸ್ವಾಮಿ, ಡಾ. ಕೆ. ಜಿ. ಪರಶುರಾಮ, ಡಾ. ಬಿ.ಟಿ. ಸಂಪತ್‌ಕುಮಾರ್, ಪ್ರಾಂಶುಪಾಲರಾದ ಬಿ. ಕರಿಯಣ್ಣ, ಡಾ. ಶೇಟ್ ಪ್ರಕಾಶ್, ಡಾ. ಎ.ಎಂ. ಮಂಜುನಾಥ ಇತರರು ಇದ್ದರು.


