ತುಮಕೂರು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಮುನ್ನ ಕಡ್ಡಾಯವಾಗಿ ಕ್ಲೋರಿನೇಷನ್ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಜನರಿಗೆ ಕುಡಿಯಲು ಸರಬರಾಜು ಮಾಡುವ ನೀರನ್ನು ಪ್ರತೀ ದಿನ ಕ್ಲೋರಿನೇಷನ್ ಮಾಡಬೇಕು. ಕ್ಲೋರಿನೇಷನ್ ಮಾಡದೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡಿದ ಬಗ್ಗೆ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿಸಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಖಡಕ್ ನಿರ್ದೇಶನ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದರೂ ಜನರಿಗೆ ಪ್ರತಿ ದಿನ ಕುಡಿಯುವ ನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಕುಡಿಯುವ ನೀರಿಗೆ ತೊಂದರೆಯುಂಟಾಗಿಲ್ಲ. ಆದರೂ ಅಧಿಕಾರಿಗಳು ಸಕಾಲದಲ್ಲಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೆಲವು ಪ್ರದೇಶದಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಕೊಳವೆ ಬಾವಿಯಲ್ಲಿ ಇಳುವರಿ ಕಡಿಮೆ, ಪೈಪ್ ಲೈನ್ ಅಳವಡಿಕೆ, ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಮತ್ತಿತರ ಕಾರಣಗಳಿಂದ ನೀರಿನ ಸಮಸ್ಯೆ ಕಂಡು ಬಂದ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.
ಎಲ್ಲಾ ನೀರಿನ ಮೂಲಗಳ ಮಾದರಿಯನ್ನು 15 ದಿನಕ್ಕೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ಪ್ರಯೋಗಾಲಯದ ವರದಿಯನ್ವಯ ಕಂಡು ಬಂದ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸದಂತೆ ಸ್ಥಳೀಯ ಅಧಿಕಾರಿಗಳು ಜನರಲ್ಲಿ ಮನವಿ ಮಾಡಬೇಕು ಎಂದು ಸೂಚಿಸಿದರು.
ತುಮಕೂರು ಜಿಲ್ಲೆಯಲ್ಲಿ ಜಾನುವಾರು ಮೇವಿನ ದಾಸ್ತಾನು ಬಗ್ಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ: ಗಿರೀಶ್‌ಬಾಬು ರೆಡ್ಡಿ ಮುಂದಿನ 29 ವಾರಗಳಿಗಾಗುವಷ್ಟು ಮೇವು ದಾಸ್ತಾನಿದ್ದು, ಯಾವುದೇ ಮೇವಿನ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.


