Thursday, January 29, 2026
Google search engine
Homeಮುಖಪುಟಶೇಕ್ಸ್ ಪಿಯರ್ ಸಾಹಿತ್ಯ ಕಾಲಾತೀತ: ಪ್ರೊ.ಓ.ಎಲ್. ನಾಗಭೂಷಣಸ್ವಾಮಿ

ಶೇಕ್ಸ್ ಪಿಯರ್ ಸಾಹಿತ್ಯ ಕಾಲಾತೀತ: ಪ್ರೊ.ಓ.ಎಲ್. ನಾಗಭೂಷಣಸ್ವಾಮಿ

ಶೇಕ್ಸ್ ಪಿಯರ್ ನ ಸಾಹಿತ್ಯವೆಲ್ಲವೂ ಜೀವನಾನುಭವದಿಂದ ರೂಪುಗೊಂಡವು. ಅವು ಕಾಲಾತೀತವಾದವು ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡವು ಎಂದು ಖ್ಯಾತ ವಿಮರ್ಶಕ ಪ್ರೊ. ಓ. ಎಲ್. ನಾಗಭೂಷಣಸ್ವಾಮಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗವು ಹಮ್ಮಿಕೊಂಡಿದ್ದ ‘ಶೇಕ್ಸ್ ಪಿಯರ್ ಸಾಹಿತ್ಯಕ್ಕೊಂದು ಪ್ರವೇಶ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೇಕ್ಸ್ ಪಿಯರ್‌ನ ಮೂವತ್ತೆಂಟು ನಾಟಕಗಳು ಕೇವಲ ಕಲ್ಪನೆಯ ಸೃಷ್ಟಿಗಳಲ್ಲ, ಇತಿಹಾಸ, ಓದು ಮತ್ತು ಅನುಭವದಿಂದ ರೂಪಿತವಾಗಿರುವವು ಎಂದರು.

ಶೇಕ್ಸ್ ಪಿಯರ್ ತನ್ನ ನಾಟಕದ ಪಾತ್ರಗಳನ್ನು ಮನುಷ್ಯ ಸಹಜ ಗುಣಗಳಿಂದ ರೂಪಿಸಿದ. ಪ್ರೀತಿ, ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಸೇಡು ಇವುಗಳಿಂದ ತುಂಬಿ ಆ ಪಾತ್ರಗಳು ಜೀವಂತವಾಗಿ ನಮಗೆ ಕಾಣುತ್ತವೆ. ಜೂಲಿಯಸ್ ಸೀಸರ್‌ನಂತೆ ಅವಕಾಶ ಸಿಕ್ಕಿದಲ್ಲಿ ಸರ್ವಾಧಿಕಾರಿಯಾಗುವ ಲಕ್ಷಣವುಳ್ಳ, ಮ್ಯಾಕ್‌ಬೆತ್‌ನಂತೆ ಅಧಿಕಾರದ ಮಹತ್ವಾಕಾಂಕ್ಷೆ ಉಳ್ಳ, ಹ್ಯಾಮ್ಲೆಟ್‌ನಂತೆ ನಿರ್ಧಾರ ತೆಗೆದುಕೊಳ್ಳಲು ಸದಾ ಹಿಂಜರಿಯುವ, ಕಿಂಗ್ ಲಿಯರ್‌ನಂತೆ ಮಕ್ಕಳಿಗೆ ತನ್ನೆಲ್ಲಾ ಆಸ್ತಿಪಾಸ್ತಿ ಕೊಟ್ಟು ಬೀದಿಪಾಲಾಗುವ ಮನುಷ್ಯರು ಎಲ್ಲಾ ಕಾಲದಲ್ಲಿಯೂ ಇದ್ದರು ಮತ್ತು ಮುಂದೆಯೂ ಇರಲಿದ್ದಾರೆ ಎಂದು ವಿಶ್ಲೇಷಿಸಿದರು.

ಶೇಕ್ಸ್ ಪಿಯರ್‌ನ ಜೀವನ ಪಯಣದ ಕುರಿತಂತೆ ಸ್ಪಷ್ಟ ಮಾಹಿತಿ ಇಲ್ಲದಿರುವ ಕಾರಣ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಲಭ್ಯ ದಾಖಲೆಗಳ ಪ್ರಕಾರ, ಶೇಕ್ಸ್ ಪಿಯರ್ ಹೆಚ್ಚಿನ ಶಿಕ್ಷಣ ಪಡೆಯಲಾಗದಿದ್ದರೂ, ಅವನ ವೈಯಕ್ತಿಕ ನೋವು ನಲಿವುಗಳಿಂದ ಸಮ್ಮಿಲನಗೊಂಡ ಸಮೃದ್ಧ ಜೀವನಾನುಭವ ಅವನಿಂದ ಇಷ್ಟೊಂದು ಗಟ್ಟಿತನದ ಸಾಹಿತ್ಯ ರಚನೆ ಮಾಡಿಸಿತೆಂದು ನಾವು ಊಹಿಸಬಹುದು ಎಂದರು.

ಬ್ರಿಟಿಷ್ ಸಾಮ್ರಾಜ್ಯ ವಿಶ್ವದಾದ್ಯಂತ ವಿಸ್ತರಿಸಿದ ರಾಜಕೀಯ ಕಾರಣದಿಂದ ಶೇಕ್ಸ್ ಪಿಯರ್ ಸಾಹಿತ್ಯ ಇಷ್ಟೊಂದು ಪಸರಿಸಿತು ಎನ್ನುವುದು ಭಾಗಶಃ ಸತ್ಯ. ಈ ಕಾರಣದಿಂದ ಅವನ ಸಾಹಿತ್ಯದಲ್ಲಿರುವ ಹಿರಿಮೆಯನ್ನು ನಾವು ಅಲ್ಲಗಳೆಯುವಂತಿಲ್ಲ. ಇದು ನಮ್ಮ ಕನ್ನಡ ಭಾಷೆಗೂ ಅನ್ವಯಿಸಬಹುದು. ಒಂದು ಭಾಷೆ ಮತ್ತು ಅದರ ಸಾಹಿತ್ಯ ವಿಸ್ತರಿಸಬೇಕಾದರೆ ಅಧಿಕಾರದ ಬೆಂಬಲ ಬಹಳ ಪ್ರಮುಖ ಅಂಶ. ಕನ್ನಡಿಗರು ಬೆಳೆದರೆ ಕನ್ನಡ ಭಾಷೆಯೂ ಬೆಳೆಯುತ್ತದೆ ಎಂದರು.

ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular