ಕಾಡುಗೊಲ್ಲರ ಹೆಸರು ಹೇಳಿಕೊಂಡು, ರಾಜಕೀಯ ಅಧಿಕಾರ ಪಡೆದು, ಕಾಡುಗೊಲ್ಲರನ್ನೇ ತುಳಿಯಲು ಹೊರಟಿರುವ ಡಿ.ಟಿ.ಶ್ರೀನಿವಾಸ್ ಅವರು ಏಪ್ರಿಲ್ 20 ರಂದು ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ಶತಮಾನೋತ್ಸವಕ್ಕೆ ಸ್ವಾಭಿಮಾನಿ ಕಾಡುಗೊಲ್ಲರು ಭಾಗವಹಿಸಬಾರದು ಎಂದು ಕಾಡುಗೊಲ್ಲರ ಮುಖಂಡ ಹಾಗೂ ತುಮಕೂರು ದಿಶಾ ಕಮಿಟಿ ಸದಸ್ಯ ಶಂಕರಪ್ಪಕೆರೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು, ಕಾಡುಗೊಲ್ಲರನ್ನು ಎಸ್.ಟಿ. ಜಾತಿಪಟ್ಟಿಗೆ ಸೇರಿಸಲು, ಕಾಡುಗೊಲ್ಲರ ಅಭಿವೃದ್ದಿ ನಿಗಮ ನೆನೆಗುದಿಗೆ ಬೀಳಲು ಕಾರಣ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮತ್ತು ಅವರ ಪತ್ನಿ ಪೂರ್ಣೀಮ ಶ್ರೀನಿವಾಸ್, ಈಗ ವಿಧಾನ ಪರಿಷತ್ ಸದಸ್ಯರಾಗಿರುವ ನಾಗರಾಜ್ ಯಾದವ್ ಅವರ ರಾಜಕೀಯ ಜೀವನ ಮುಗಿಸಲು, ಅವರ ಪತ್ನಿಯವರ ಸ್ವಕ್ಷೇತ್ರ ಚಿಕ್ಕೋಡಿಯಲ್ಲಿ ಯಾದವ ಸಮಾವೇಶ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಸ್ವಾಭಿಮಾನಿ ಕಾಡುಗೊಲ್ಲರು ಚಿಕ್ಕೋಡಿಯ ಸಮಾವೇಶದಲ್ಲಿ ಪಾಲ್ಗೊಳ್ಳಬಾರದು ಎಂದರು.
ಹತ್ತಾರು ವರ್ಷಗಳಿಂದ ಕಾಡುಗೊಲ್ಲರಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ, ನೊಂದಣಿ ಮಾಡಿಸಿ, ಮುಂದುವರೆದ ಊರುಗೊಲ್ಲರಿಂದ ಬಿಡಿಸಿಕೊಂಡು ಸ್ವಾತಂತ್ರ ಅಸ್ಥಿತ್ವ ಕಂಡುಕೊಳ್ಳಲು ಹೋರಾಟ ರೂಪಿಸಲಾಯಿತು. ಆದರೂ ಕಾಡುಗೊಲ್ಲರ ಹೆಸರು ಹೇಳಿಕೊಂಡು ಪೂರ್ಣಿಮ ಶ್ರೀನಿವಾಸ್ ಹಿರಿಯೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ನಂತರ ಕಾಡುಗೊಲ್ಲರನ್ನು ತುಳಿಯುವ ಪ್ರಯತ್ನ ಮುಂದುವರೆಸಿದ್ದಾರೆ.
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರಿಸಲು ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ ಎಂದು ಈ ಹಿಂದೆ ಮುಖ್ಯಮಂತ್ರಿಗಳಿಗೆ ಹೇಳಿ, ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು, ಗೊಲ್ಲರ ಅಭಿವೃದ್ದಿ ನಿಗಮ ಎಂದು ಬದಲಿಸಲು, ಅಧ್ಯಕ್ಷರ ನೇಮಕವಾಗದಂತೆ ಮಾಡಿ, ಇಡೀ ಕಾಡುಗೊಲ್ಲ ಸಮುದಾಯವನ್ನೇ ತುಳಿಯುವ ಪ್ರಯತ್ನ ನಡೆಸಿದ್ದರು ಎಂದು ಶಂಕರಪ್ಪ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಡುಗೊಲ್ಲರ ಸಂಘದ ಗೌರವಾಧ್ಯಕ್ಷ ಎಸ್.ಡಿ.ಬಸವರಾಜು, ಪ್ರಭಾರಿ ಅಧ್ಯಕ್ಷ ಜಿ.ರಮೇಶ್, ನಾಗರಾಜು, ರಾಜಕುಮಾರ್, ವೆಂಕಟೇಶ್, ದೊಡ್ಡಯ್ಯ, ಶಿವಣ್ಣ, ಚಿಕ್ಕಣ್ಣ, ರವಿ ಜಕ್ಕೇನಹಳ್ಳಿ, ತಿಮ್ಮಪ್ಪ, ಬಾಲಯ್ಯ, ಕೆ.ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


