Thursday, April 24, 2025
Google search engine
Homeಮುಖಪುಟಮುಡಾ ಪ್ರಕರಣ-ತನಿಖೆ ಮುಂದುವರಿಸಲು ಕೋರ್ಟ್ ಆದೇಶ

ಮುಡಾ ಪ್ರಕರಣ-ತನಿಖೆ ಮುಂದುವರಿಸಲು ಕೋರ್ಟ್ ಆದೇಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಲೋಕಾಯುಕ್ತ ವರದಿ ನೀಡಿದ್ದರೂ ಇವರು ಸಂಕಷ್ಟದಿಂದ ಇನ್ನು ಪಾರಾಗಿಲ್ಲ. 

ಪ್ರಕರಣದ ಬಗ್ಗೆ  ತನಿಖೆ ನಡೆಸಿ ಲೋಕಾಯುಕ್ತ ನೀಡಿರುವ ಅಂತಿಮ ವರದಿ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಜಾರಿ ನಿರ್ದೇಶನಾಲಯ  ಸಲ್ಲಿಸಿದ್ದ ಅರ್ಜಿಗಳ ಆಧಾರದಡಿ ಲೋಕಾಯುಕ್ತ ಮುಂದುವರಿದ ತನಿಖೆ ನಡೆಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಆದ್ದರಿಂದ ಲೋಕಾಯುಕ್ತರು ವಿಚಾರಣೆ ಮುಂದುವರೆಸಬಹುದಾಗಿದೆ ಎಂದು ತಿಳಿಸಿ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದರು.

ಅಲ್ಲದೆ ಈ ಪ್ರಕರಣದಲ್ಲಿ ನೊಂದ ವ್ಯಕ್ತಿಯಂತೆ ಅರ್ಜಿ ಸಲ್ಲಿಸುವುದಕ್ಕೆ ಜಾರಿ ನಿರ್ದೇಶನಾಲಯಕ್ಕೆ ಅವಕಾಶ ನೀಡಿದರು.

ಪ್ರಕರಣದ ಬಗ್ಗೆ ಹಿಂದೆ ನಡೆಸಿದ್ದ ವಿಚಾರಣೆ ವೇಳೆ, ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ವಕೀಲರು, ತನಿಖೆಯಲ್ಲಿ ಕೆಲವು ಅಂಶಗಳು ಪತ್ತೆಯಾಗಿದ್ದು, ಅದನ್ನು ಲೋಕಾಯುಕ್ತ ಪೊಲೀಸರ ಜತೆ ಹಂಚಿಕೊಳ್ಳಲಾಗಿತ್ತು. ಆದರೆ, ಆ ಅಂಶಗಳನ್ನು ಪರಿಗಣಿಸದೇ ಲೋಕಾಯುಕ್ತ ಪೊಲೀಸರು ಬಿ-ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ ಎಂದು ವಿವರಿಸಿದ್ದರು.

ಇದಕ್ಕೆ ನ್ಯಾಯಾಧೀಶರು, ನ್ಯಾಯಾಲಯವು ಬಿ ರಿಪೋರ್ಟ್ ಅನ್ನು ಒಪ್ಪಿಕೊಂಡರೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದರು. ಈ ವೇಳೆ ಇಡಿ ಪರ ವಕೀಲರು, ಬಿ ರಿಪೋರ್ಟ್ ಅಂಗೀಕರಿಸಿದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಇಡಿಗೆ ಬಿ-ರಿಪೋರ್ಟ್ ಪ್ರಶ್ನಿಸಲು ಅಧಿಕಾರ ಇದೆ ಎಂದು ಪೀಠಕ್ಕೆ ತಿಳಿಸಿದರು.

ಇ.ಡಿ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಲು ಅಧಿಕಾರ ಇದೆಯೇ ಎಂಬುದರ ಕುರಿತು ಲೋಕಾಯುಕ್ತ ಪೊಲೀಸರ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಅಲ್ಲದೇ, ಬಿ ರಿಪೋರ್ಟ್ ಅನ್ನು ಇಡಿ ಅಧಿಕಾರಿಗಳು ಪ್ರಶ್ನೆ ಮಾಡುವುದಕ್ಕೆ ಅಧಿಕಾರ ಇದೆಯೇ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಲೋಕಾಯುಕ್ತ ಪರ ವಕೀಲರಿಗೆ ಸೂಚನೆ ನೀಡಿತ್ತು.

ಈ ಹಿಂದೆ ಪ್ರಕರಣ ಸಂಬಂಧ ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಸಾಕಷ್ಟು ಅಕ್ರಮಗಳಾಗಿವೆ. ಅಲ್ಲದೆ, ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಲಾಗಿತ್ತು. ಆದರೂ, ಕ್ಲೀನ್‌ ಚಿಟ್‌ ನೀಡಿದ್ದಾರೆ. ಆದ್ದರಿಂದ ಬಿ.ವರದಿ ತಿರಸ್ಕರಿಸಬೇಕು ಎಂದು ಕೋರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular