ಆಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಅಲ್ಲಿನ ಪರಿಸ್ಥಿತಿ ತುಂಬ ಗಂಭೀರತೆಗೆ ಹೋಗಿದ್ದು ಭಾರತೀಯರನ್ನು ಕರೆತರುವುದು ಭಾರತ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ 31 ಪಕ್ಷಗಳ 37 ನಾಯಕರು ಭಾಗಿಯಾಗಿದ್ದರು. ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲಾ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಅಭಿವೃದ್ಧಿ ರಾಷ್ಟ್ರೀಯ ಕಾಳಜಿಯಾಗಿದೆ. ರಾಷ್ಟ್ರೀಯ ಏಕತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇದು ಎಲ್ಲಾ ಪಕ್ಷಗಳ ಅಭಿಪ್ರಾಯವಾಗಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ದೇವಿಶಕ್ತಿ ಕಾರ್ಯಾಚರಣೆ ಮೂಲಕ ಆರು ವಿಮಾನಗಳು ಕಾಬೂಲ್ ನಿಂದ ಭಾರತೀಯ ಪ್ರಜೆಗಳನ್ನು ಕರೆತರುವ ಕೆಲಸ ಮಾಡುತ್ತಿವೆ. ಈಗಾಗಲೇ ಸಾಕಷ್ಟು ಭಾರತೀಯರನ್ನು ಕರೆತರಲಾಗಿದೆ. ಆದರೆ ಎಲ್ಲರನ್ನೂ ಅಲ್ಲ. ಇನ್ನೂ ಕೆಲವರು ಕಾಬೂಲ್ ಹೊರಗೆ ಇದ್ದಾರೆ. ಜೊತೆಗೆ ಭಾರತಕ್ಕೆ ಬರಲು ಇಚ್ಚಿಸಿದ ಆಫ್ಘನ್ ಪ್ರಜೆಗಳನ್ನು ಕರೆತರುತ್ತಿದ್ದೇವೆ ಎಂದರು.
ಕಾಬೂಲ್ ಭಾರತೀಯ ರಾಯಭಾರಿ ಕಚೇರಿಯಲ್ಲಿದ್ದ 175 ಮಂದಿ ಸಿಬ್ಬಂದಿ, 263 ಭಾರತೀಯ ಪ್ರಜೆಗಳು, 112 ಮಂದಿ ಆಫ್ಘನ್ ಪ್ರಜೆಗಳನ್ನು ಕರೆತಂದಿದ್ದು, ಇದರಲ್ಲಿ ಹಿಂದೂ, ಸಿಖ್ ಧರ್ಮೀಯರಿದ್ದಾರೆ. 13 ಮಂದಿ ಮೂರನೇ ದೇಶದ ಪ್ರಜೆಗಳು ಸೇರಿ ಒಟ್ಟು 565 ಮಂದಿಯನ್ನು ಕರೆತಂದಿದ್ದೇವೆ ಎಂದು ಹೇಳಿದ್ದಾರೆ.
ಆಫ್ಘನ್ ಪ್ರಜೆಗಳ ಸಹಕಾರದಿಂದ ಕಾಬೂಲ್ ನಲ್ಲಿ 500 ಪ್ರಾಜೆಕ್ಟ್ ಗಳನ್ನು ಹಮ್ಮಿಕೊಂಡಿದ್ದೇವೆ. ಅಲ್ಲಿನ ಜನರೊಂದಿಗೆ ಸ್ನೇಹ ಬಾಂಧವ್ಯ ಮುಂದುವರಿಯಲಿದ್ದು ನಮಗೆ ಸಹಕಾರ, ಮಾರ್ಗದರ್ಶನ ನೀಡಬೇಕು ಎಂದು ಜೈಶಂಕರ್ ಕೋರಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಇಡೀ ದೇಶವೇ ಸಮಸ್ಯೆಯಲ್ಲಿದೆ. ಆಫ್ಘನ್ ಮಹಿಳಾ ರಾಯಭಾರಿಯೊಬ್ಬರನ್ನು ಭಾರತ ಹೊರದಬ್ಬಿ ತಪ್ಪು ಮಾಡಿದೆ. ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.