ಡಿಸೇಲ್ ಮೇಲಿನ ಸೆಸ್ ಕಡಿತ, ಅಂತರರಾಜ್ಯ ಆರ್.ಟಿ.ಓ. ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.15 ರಿಂದ ರಾಜ್ಯದಾದ್ಯಂತ ಲಾರಿ ಮಾಲೀಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಕೈಗೊಳಲಿದ್ದಾರೆ ಎಂದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಎಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿ ಮಾಲೀಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಐದು ರೂ ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಇಂದಿನ ಪೈಪೋಟಿಯಲ್ಲಿ ನಾವು ತಕ್ಷಣವೇ ಬಾಡಿಗೆ ರೂಪದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರದ ನೀತಿಗಳಿಂದ ಸುಮಾರು ಆರು ಲಕ್ಷ ಲಾರಿಗಳ ಮಾಲೀಕರು ಮತ್ತು ಅವರ ಅವಲಂಬಿತರು ಬೀದಿಗೆ ಬೀಳುವುದು ಖಚಿತವಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳಲ್ಲದೇ, ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 18 ಕಡೆಗಳಲ್ಲಿ ಟೋಲ್ ಕಟ್ಟಬೇಕಾಗಿದೆ. ಇದರಿಂದ ರೈತರು ಮತ್ತು ಲಾರಿ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ. ದುಡಿಮೆಯ ಶೇ.40 ತೆರಿಗೆ, ಟೋಲ್ ರೂಪದಲ್ಲಿ ಕಟ್ಟಿ ಉಳಿದ ಹಣದಲ್ಲಿ ಗಾಡಿ ಖರ್ಚು, ವಾಹನದ ಬೀಡಿ ಭಾಗಗಳು, ಡ್ರೈವರ್, ಕ್ಲೀನರ್ ಸಂಬಳ ಇವುಗಳನ್ನು ಕೊಟ್ಟು ಮನೆಗೆ ಏನು ತೆಗೆದುಕೊಂಡು ಹೋಗುವುದು. ರಾಜ್ಯ ಹೆದ್ದಾರಿಗಳಲ್ಲಿ ಕೆಲವು ಕಡೆ ಇರುವ ರಸ್ತೆಗೆ ಬಣ್ಣ ಹೊಡೆದು ಟೋಲ್ ಕಟ್ಟಿಸಿಕೊಳ್ಳುತ್ತಿದ್ದಾರೆ. ನಾವು ಕಟ್ಟುವ ರೋಡ್ ಟ್ಯಾಕ್ಸ್ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.
ಇಂದು ಲಾರಿ ಸೇರಿದಂತೆ ಎಲ್ಲಾ ವಾಹನಗಳ ದಾಖಲಾತಿ ಡಿಜಿಟಲ್ ಆಗಿದೆ. ಕುಳಿತಲ್ಲಿಯೇ ಒಂದು ವಾಹನದ ಸಂಪೂರ್ಣ ಮಾಹಿತಿ ಸಿಗುತ್ತದೆ. ಹೀಗಿದ್ದೂ ಅಂತರರಾಜ್ಯ ಗಡಿಗಳಲ್ಲಿ ಆರ್.ಟಿ.ಓ. ಚೆಕ್ ಪೋಸ್ಟ್ ಅಗತ್ಯವಿದೆಯೇ, 1928ರಲ್ಲಿ ಇದ್ದ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ತೆರವು ಮಾಡಲಾಗಿದೆ. ಹಲವು ಬಾರಿ ಮನವಿ ಮಾಡಿದರು ಸರಕಾರ ಅಂತರ ರಾಜ್ಯ ಆರ್.ಟಿ.ಓ ಚೆಕ್ ಪೋಸ್ಟ್ ತೆರವು ಮಾಡಿಲ್ಲ. ಇದರಿಂದ ಲಾರಿ ಸೇರಿದಂತೆ ಇತರೆ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರು ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ ಎಚಿದು ಹೇಳಿದರು.
ಕೇಂದ್ರ ಸರಕಾರದ ನೀತಿಗಳು ಗಬ್ಬೆದ್ದು ಹೋಗಿವೆ. 3 ಸಾವಿರ ಕೋಟಿ ರೂ ಹೂಡಿಕೆ ಮಾಡಿ ನಿರ್ಮಿಸಿದ ರಸ್ಯೆಗೆ 12 ಸಾವಿರ ಕೋಟಿ ಟೋಲ್ ಸಂಗ್ರಹಿಸಿದ್ದರು ಟೋಲ್ ತೆಗೆದಿಲ್ಲ. 2008ರಲ್ಲಿ ಕೇಂದ್ರದ ಕಾಯ್ದೆ ಪ್ರಕಾರ, ಒಮ್ಮೆ ಟೋಲ್ ಸಂಗ್ರಹ ಪೂರ್ಣಗೊಂಡ ನಂತರ ಕೇವಲ ನಿರ್ವಹಣಾ ವೆಚ್ಚವಾಗಿ ಶೇ.40ರಷ್ಟು ಶುಲ್ಕ ಮಾತ್ರ ಪಡೆಯಬೇಕು. ಆದರೆ ಇದುವರೆಗೂ ದೇಶದಲ್ಲಿ ಜಾರಿಗೆ ಬಂದಿಲ್ಲ. ದೇಶದಲ್ಲಿ 996 ಟೋಲ್ ಗಳಿಂದ ಸಾವಿರಾರು ಹಣ ಕಟ್ಟಬೇಕಾಗಿದೆ. ಒಂದು ಕಿ.ಮಿ.6 ರೂ ಶುಲ್ಕ ಕಟ್ಟಬೇಕು. ಇದು ಬಾರಿ ಹೊಡೆತ ನೀಡಿದೆ ಎಂದರು
ಅಲ್ ಇಂಡಿಯಾ ಕಾಂಗ್ರೆಸ್ ಲಾರಿ ಅಸೋಸಯೇಷನ್ ಅಧ್ಯಕ್ಷ ಮುಜಾಮಿಲ್ ಪಾಷ ಮಾತನಾಡಿ, ಕರ್ನಾಟಕದಲ್ಲಿ ಡಿಸೇಲ್ ಬೆಲೆ ಹೆಚ್ಚಳದಿಂದ ಲಾರಿ ಮಾಲೀಕರು ಮತ್ತು ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿಯೇ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಸರಕಾರ ಕರೆದು ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದರು.
ಮಾಧ್ಯಮಗೋಷ್ಟಿಯಲ್ಲಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಅಹಮದ್ ಖಾನ್, ಚಂದ್ರಣ್ಣ, ಪರ್ವೀಜ್ ಸೇರಿದಂತೆ ಹಲವರು ಇದ್ದರು.


