ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸಣ್ಣ ನೀರಾವರಿ ಇಲಾಖೆ, ನರೇಗಾ, ಜೆಜೆಎಂ ಯೋಜನೆಗಳಲ್ಲಿ ನೂರಾರು ಕೋಟಿ ರೂಗಳ ಅವ್ಯವಹಾರ ನಡೆದಿದ್ದು ಅಧಿಕಾರಿಗಳು ಲೂಟಿ ಹೊಡೆಯುತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಹಾಲಿನ ದರ ಹೆಚ್ಚಳ ಮಾಡಿರುವುದನ್ನೇ ದೊಡ್ಡದೆಂದು ಬಿಂಬಿಸುತ್ತಾ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿರುವ ತುಮಕೂರು ಗ್ರಾಮಾಂತರ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಯಾವಾಗ ಪ್ರತಿಭಟನೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಸೇರಿ ಕೆರೆಗಳ ನಿರ್ವಹಣೆಗೆಂದು ಬಂದ 1 ಕೋಟಿ ರೂ ಅನುದಾನವನ್ನು ಕಾಮಗಾರಿ ನಡೆಸದೆ ಬಿಲ್ ಪಾವತಿ ಮಾಡಿದ್ದಾರೆ. ನಾಗವಲ್ಲಿ ಅಮಾನಿಕೆರೆ, ಕುಚ್ಚಂಗಿ ಕೆರೆ ನಿರ್ವಹಣೆ ಸೇರಿದಂತೆ ಒಟ್ಟು 9 ಕೆರೆಗಳ ನಿರ್ವಹಣೆಗೆ 1 ಕೋಟಿ ರೂ ಅನುದಾನ ಬಂದಿದ್ದು, ಇದನ್ನು ಟೆಂಡರ್ ಕೆರೆದು ಅರ್ನಹರಿಗೆ ಟೆಂಡರ್ ನೀಡಲಾಗಿದೆ. ಅಲ್ಲದೆ 12-03-2025ರಂದು ಅರ್ಹರ ಗುತ್ತಿಗೆದಾರರನ್ನು ಡಿಲೀಟ್ ಮಾಡಿ, ಅನರ್ಹರಿಗೆ ವರ್ಕ ಆರ್ಡರ್ ನೀಡಿ, 13-03-2025ರಂದೇ 48.85 ಲಕ್ಷ,32.57 ಲಕ್ಷಕ್ಕೆ ಎರಡು ಬಿಲ್ ನೀಡಲಾಗಿದೆ ಎಂದು ಆರೋಪಿಸಿದರು.
ಕೇವಲ ಒಂದು ದಿನದಲ್ಲಿ ಕೆರೆ ಕಾಮಗಾರಿ ನಡೆಸಲು ಸಾಧ್ಯವೇ?, ಇದರ ಹಿಂದೆ ಯಾರಿದ್ದಾರೆ. ಇದು ಶಾಸಕರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ ಡಿ.ಸಿ.ಗೌರಿಶಂಕರ್, ಈ ವಿಚಾರವಾಗಿ ಶೀಘ್ರವೇ ಲೋಕಾಯುಕ್ತ ಮತ್ತು ಸರಕಾರಕ್ಕೆ ತನಿಖೆಗಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಸದನದಲ್ಲಿ ಪ್ರಸ್ತಾಪವಾಗಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೂರಾರು ಕೋಟಿ ರೂಗಳ ಕಾಮಗಾರಿ ನಡೆದಿದ್ದು,ಎಲ್ಲಿಯೂ ಕೂಡ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ನಿಯಮದ ಪ್ರಕಾರ ಪೈಫ್‌ನ್ನು ಸುಮಾರು 1.10 ಮೀಟರ್ ಆಳದಲ್ಲಿ ಹೂಳಬೇಕು ಎಂಬ ನಿಯಮವಿದ್ದರೂ ಜನರಿಗೆ ಕಾಣುವಂತೆ ಮೇಲೆ ಮೇಲೆಯೇ ಪೈಫ್ ಹೂಳಾಗಿದೆ. ಕೆಲವೊಂದು ಕಡೆ ಆರ್.ಡಬ್ಲುö್ಯ.ಎಸ್‌ನವರು ನಡೆಸಿರುವ ಕಾಮಗಾರಿ ಯನ್ನು ತಮ್ಮದೆಂದು ಬಿಲ್ ಮಾಡಿಕೊಂಡಿರುವ ಉದಾಹರಣೆ ಇದೆ. ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗಳು ಸೇರಿದಂತೆ ಸಂಬAಧಪಟ್ಟವರಿಗೆ ಫೆಬ್ರವರಿಯಲ್ಲಿಯೇ ದೂರು ನೀಡಿದ್ದೇನೆ. ಅಟಲ್ ಭೂ ಜಲ ಯೋಜನೆಯಲ್ಲಿಯೂ ಇದೇ ರೀತಿಯ ಅವ್ಯವಹಾರ ನಡೆದಿದ್ದು, ಸರಕಾರ ಈ ಕುರಿತು ಕೂಲಂಕಷ ತನಿಖೆ ನಡೆಸಿ ತಪಿತಸ್ಥರ ವಿರುದ್ದು ಕ್ರಮ ಕೈಗೊಳ್ಳಬೇಕು. ಆಗ ಉಳಿದವರಿಗೆ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದಿಗೂ 52 ಹಳ್ಳಿಗಳಲ್ಲಿ ಸ್ಮಶಾನವಿಲ್ಲ. ಆ ಊರಿನಲ್ಲಿ ಯಾರಾದರೂ ಸತ್ತರೇ ರಸ್ತೆ ಬದಿಯಲ್ಲೋ,ಕೆರೆ ಅಂಗಳಲ್ಲೋ ಹೂಳಬೇಕಾದ ಸ್ಥಿತಿ ಇದೆ.ದುರ್ಗದಹಳ್ಳಿ ಘಟನೆ ನಮ್ಮ ಕಣ್ಣಮುಂದೆಯೇ ಇದೆ.ಆಗಿದ್ದರೂ ಸ್ಮಶಾನಗಳಿಗೆ ಅದ್ಯತೆಯ ಮೇಲೆ ಭೂಮಿ ನೀಡುವಲ್ಲಿ ಶಾಸಕರ ವಿಫಲರಾಗಿದ್ದಾರೆ. ಮೊದಲು ಇದರ ಬಗ್ಗೆ ಹೋರಾಟ ಮಾಡಲಿ, ಆ ನಂತರ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲಿ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾರಾಯಣಪ್ಪ, ಕೆಂಪಣ್ಣ,ಊರುಕೆರೆ ಉಮೇಶ್, ನರುಗನಹಳ್ಳಿ ವಿಜಯಕುಮಾರ್,ರಮೇಶ್ ಇದ್ದರು.