Thursday, January 29, 2026
Google search engine
Homeಮುಖಪುಟಒಳಮೀಸಲಾತಿ-ಮಧ್ಯಂತರ ವರದಿ ಮಾದಿಗರ ವಿರೋಧಿ-ಚರ್ಚಿಸಲು ಏ.9ರಂದು ಮಾದಿಗ ಮುಖಂಡರ ಸಭೆ

ಒಳಮೀಸಲಾತಿ-ಮಧ್ಯಂತರ ವರದಿ ಮಾದಿಗರ ವಿರೋಧಿ-ಚರ್ಚಿಸಲು ಏ.9ರಂದು ಮಾದಿಗ ಮುಖಂಡರ ಸಭೆ

ಸುಪ್ರೀಕೋರ್ಟಿನ ಏಳು ಮಂದಿ ನ್ಯಾಯಮೂರ್ತಿಗಳ ನಿರ್ಣಯದಂತೆ ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ಸರಕಾರ ರಚಿಸಿರುವ ನ್ಯಾ. ನಾಗಮೋಹನ್‌ದಾಸ್ ಏಕಸದಸ್ಯ ಆಯೋಗ ನೀಡಿರುವ ಮಧ್ಯಂತರ ವರದಿ ಮಾದಿಗ ವಿರೋಧಿಯಾಗಿದ್ದು, ಸರಕಾರವೇ ಹೇಳಿ ಬರೆಸಿದ ವರದಿಯಾಗಿದೆ. ಇದರ ವಿರುದ್ದ ಹೋರಾಟ ರೂಪಿಸಲು 2025ರ ಏಪ್ರಿಲ್ 9 ರಂದು ಮಾದಿಗ ಮುಖಂಡರ ಸಭೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಅರ್.ಪಿ.ಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ದಾದಾಸಾಹೇಬ್ ಎನ್.ಮೂರ್ತಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಅತಿ ಹಿಂದುಳಿದಿರುವ ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟಕ್ಕೆ ನ್ಯಾಯ ದೊರಯಬಹುದು ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದೇವೆ. ಸರಕಾರ ಮಾತ್ರ ಒಂದೊಂದು ನೆಪ ಮಾಡಿ, ಮುಂದೂಡುತ್ತಲೇ ಬಂದಿದೆ. ಗುರುವಾರ ಸಲ್ಲಿಕೆಯಾಗಿರುವ ಮಧ್ಯಂತರ ವರದಿ ಸಹ ನಮ್ಮ ನ್ಯಾಯಯುತ ಬೇಡಿಕೆಯನ್ನು ಮುಂದಕ್ಕೆ ಹಾಕುವ ಮತ್ತೊಂದು ಪ್ರಯತ್ನವಾಗಿದೆ ಎಂದರು.

ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳಲ್ಲಿ ಅತಿ ಹಿಂದುಳಿದಿರುವ ಮಾದಿಗ, ಮೋಚಿ, ದಕ್ಕಲಿಗ, ಸಮಗಾರ, ಜಾಡಮಾಲಿಗಳಿಗೆ ಸಾಕಷ್ಟು ವಂಚನೆಯಾಗಿದೆ. ಎಂಪರಿಕಲ್ ಡೇಟಾ ಪಡೆಯಲು ಮತ್ತೊಂದು ಸಮೀಕ್ಷೆ ಮಾಡುವಂತಿದ್ದರೆ ನ್ಯಾ.ನಾಗಮೋಹನ್ ದಾಸ್ ಸಮಿತಿಯ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ ಎನ್.ಮೂರ್ತಿ, ನಿಖರವಾದ ದಾಖಲೆಗಾಗಿ ಈಗಾಗಲೇ ನಮ್ಮ ಬಳಿ ನ್ಯಾ.ಸದಾಶಿವ ಆಯೋಗ, ಕಾಂತರಾಜು ವರದಿ, ನ್ಯಾ. ನಾಗಮೋಹನ್ ದಾಸ್ ವರದಿಗಳಿವೆ. ಇವುಗಳನ್ನು ಕ್ರೂಢೀಕರಿಸಿ 101 ಜಾತಿಗಳಿಗೂ ನ್ಯಾಯ ಒದಗಿಸಬಹುದಾಗಿತ್ತು. ಆದರೆ ನಮಗೆ ನ್ಯಾಯ ನಿರಾಕರಿಸುವ ಉದ್ದೇಶದಿಂದಲೇ, ಒಳಮೀಸಲಾತಿ ವಿರೋಧಿಸುವ ಸಮುದಾಯಗಳ ಬೆದರಿಕೆ ನೀಡಿದ ವರದಿಯಾಗಿದೆ. ಮಾದಿಗರಿಗೆ ಮೀಸಲಾತಿ ನಿರಾಕರಿಸುವ ರಾಜಕೀಯ ಷಡ್ಯಂತ್ರ.ಹೋರಾಟವನ್ನು ತಣ್ಣಗಾಗಿಸುವ ಕುತಂತ್ರವಾಗಿದೆ. ಇದರ ವಿರುದ್ದ ಉಗ್ರ ಹೋರಾಟವನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದು, ಈ ವೇಳೆ ಆಗುವ ಆಗು, ಹೋಗುಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎನ್.ಮೂರ್ತಿ ನುಡಿದರು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾದಿಗ ವಿರೋಧಿಯಾಗಿದೆ ಎಂಬುದಕ್ಕೆ ಈ ಮಧ್ಯಂತರ ವರದಿಯೇ ಸಾಕ್ಷಿಯಾಗಿದೆ. ಸಾಮಾಜಿಕ ನ್ಯಾಯದ ಹರಿಕಾರ ಎಂಬುದು ಒಂದು ಮುಖವಾಡವಷ್ಟೇ. ಕಾಂಗ್ರೆಸ್ ಪಕ್ಷದ ಈ ನಡೆಗೆ ಮುಂದಿನ ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸುತ್ತದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮಿಂದಲೇ ಆರಂಭ. ಕಾಂಗ್ರೆಸ್ ಸರಕಾರಕ್ಕೆ 138 ಶಾಸಕ ಜನಬೆಂಬಲವಿದೆಯೇ ಹೊರತು, ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವ ಬದ್ದತೆ ಇಲ್ಲ. ಇದೊಂದು ಹೊಣೆಗೇಡಿ ಸರಕಾರ ಎಂದು ಕಿಡಿ ಕಾರಿದರು.

ನ್ಯಾ. ನಾಗಮೋಹನ್ ದಾಸ್ ಅವರ ಮಧ್ಯಂತರ ವರದಿಯನ್ನು ವಿರೋಧಿಸಿ, 2025ರ ಏಪ್ರಿಲ್ 9 ರಂದು ನಡೆಯುವ ಸಭೆಗೆ ಮಾದಿಗ ಮತ್ತು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಸಂತ್ರಸ್ಥ ಜಾತಿಗಳ, ಸಂಘಟನಗಳ ಎಲ್ಲಾ ಮುಖಂಡರನ್ನು ಕರೆದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ಇದು ಒಂದು ನಿರ್ಣಾಯಕ ಹೋರಾಟವಾಗಲಿದೆ ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ದಸಂಸ ತುಮಕೂರು ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಆರ್.ಪಿ.ಐ ಪಕ್ಷದ ರಾಜ್ಯ ಉಪಾಧ್ಯಕ್ಷ ಬೈಲ ಹೊನ್ನಯ್ಯ, ಜಿಲ್ಲಾಧ್ಯಕ್ಷ ಸುನೀಲ್, ಹನುಮಂತರಾಜು, ಮಂಜುನಾಥ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular