ನನ್ನ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ನಿನ್ನೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪೆನ್ ಡ್ರೈವ್ ಸಮೇತ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರಿಗೂ ದೂರು ಸಲ್ಲಿಸಿದರು.
ರಾಜ್ಯದಲ್ಲಿ ಹನಿಟ್ರ‍್ಯಾಪ್ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬೆನ್ನಲ್ಲೆ ನನ್ನ ಕೊಲೆಗೆ ಸುಫಾರಿ ಎಂಬ ಹೊಸ ಬಾಂಬ್ ಸಿಡಿಸಿರುವ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಎಸ್ಪಿ ಅಶೋಕ್ ಅವರಿಗೆ ಸುಫಾರಿ ಬಗ್ಗೆ ಸಂಭಾಷಣೆ ಇರುವ ಆಡಿಯೋವನ್ನು ದಾಖಲೆ ಸಮೇತ ಎರಡು ಪುಟಗಳ ದೂರು ನೀಡಿದರು.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ರಾಜೇಂದ್ರ, ನನ್ನ ಹತ್ಯೆಗೆ 70 ಲಕ್ಷಕ್ಕೆ ಸುಫಾರಿ ಕೊಡಲಾಗಿದೆ. ಈ ಸಂಬಂಧ 5 ಲಕ್ಷ ಮುಂಗಡವಾಗಿ ಪಡೆದಿರುವ ಬಗ್ಗೆ ಆಡಿಯೋ ಸಂಭಾಷಣೆಯಲ್ಲಿ ಇದೆ. ಅಲ್ಲದೆ ನನ್ನ ಕಾರಿಗೆ ಜಿಪಿಎಸ್ ಅಳವಡಿಸಬೇಕು ಎಂಬ ಬಗ್ಗೆಯೂ ಸಂಭಾಷಣೆ ಇದೆ. ಎಲ್ಲವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದು, ಎಫ್‌ಐಆರ್ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದರು.
ಸುಮಾರು 18 ನಿಮಿಷಗಳ ಆಡಿಯೋ ಕ್ಲಿಪ್ ದೊರೆತಿದ್ದು, ಈ ಆಡಿಯೋದಲ್ಲಿ ಒಬ್ಬ ಮಹಿಳೆ ಮತ್ತು ಹುಡುಗ ಮಾತನಾಡಿದ್ದು, ಮಂತ್ರಿ ಮಗನನ್ನು ಹೊಡೆಯಬೇಕು, ಕಾರಿಗೆ ಟ್ರ‍್ಯಾಕರ್ ಹಾಕಬೇಕು ಎಂಬ ಬಗ್ಗೆಯೂ ಮಾತನಾಡಿರುವ ಸಂಭಾಷಣೆ ಇದೆ ಎಂದು ಹೇಳಿದರು.
ಸೋಮ ಮತ್ತು ಭರತ್ ಎಂಬ ಹೆಸರುಗಳು ಆಡಿಯೋ ಸಂಭಾಷಣೆಯಲ್ಲಿ ಕೇಳಿ ಬಂದಿದೆ. ಈ ಸೋಮ ಮತ್ತು ಭರತ್ ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಏಕೆ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿಯವರಿಗೆ ದೂರು ಸಲ್ಲಿಸಿದ್ದೇನೆ ಎಂದರು.
ಹನಿಟ್ರ‍್ಯಾಪ್ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಹನಿಟ್ರ‍್ಯಾಪ್ ವಿಚಾರವನ್ನು ನಾನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಫೋನ್ ಕಾಲ್ಸ್, ಮೆಸೇಜ್, ವಿಡಿಯೋ ಕಾಲ್ ಬರುತ್ತಿದೆ ಎಂದು ಹೇಳಿದ್ದೇನೆ ಅಷ್ಟೇ ಎಂದರು.
ಕಳೆದ 2024 ರ ನವೆಂಬರ್ 16 ರಂದು ನನ್ನ ಮಗಳ ಹುಟ್ಟುಹಬ್ಬ ಇತ್ತು. ಅವತ್ತು ಮನೆಗೆ ಶಾಮಿಯಾನ ಹಾಕಲು ಬಂದವರು ನನ್ನ ಮೇಲೆ ದಾಳಿ ಮಾಡುವ ಹಾಗೂ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಬಂದಿದ್ದರು. ಈ ವಿಚಾರ ನನಗೆ ಜನವರಿಯಲ್ಲಿ ಗೊತ್ತಾಯಿತು. ಇದಕ್ಕೆ ಸಂಬಂಧಿಸಿದಂತೆ ಒಂದು ವಾಯ್ಸ್ ರೆಕಾರ್ಡ್ ಬರುತ್ತದೆ. ನನ್ನ ಸೋರ್ಸ್ ಮೂಲಕ ವಿಚಾರ ಗೊತ್ತಾಗುತ್ತದೆ. ಆ ವಾಯ್ಸ್ ಮೆಸೇಜ್‌ನಲ್ಲಿ 5 ಲಕ್ಷ ಹಣ ನೀಡಿರೋದು ಗೊತ್ತಾಗುತ್ತದೆ. ನನ್ನ ಕೊಲೆಗೆ ಸುಫಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.


