ಒಳಮೀಸಲಾತಿಗಾಗಿ ಒತ್ತಾಯಿಸಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳ ಹರಿಹರದಿಂದ ಮಾರ್ಚ್ 5 ರಂದು ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ 16ರಂದು ತುಮಕೂರು ನಗರ ಪ್ರವೇಶಿಸಲಿದ್ದು, ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲು ಮಾದಿಗ ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ.
ತುಮಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಮೀನಾಮೇಷ ಎಣಿಸುತ್ತಿದೆ ಎಂದು ಸಭೆಯಲ್ಲಿ ಸರ್ಕಾರದ ವಿರುದ್ಧ ಮಾದಿಗ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಮಾರ್ಚ್ 15ರ ರಾತ್ರಿ ತುಮಕೂರು ನಗರಕ್ಕೆ ಸಮೀಪದ ಊರುಕೆರೆ ಗ್ರಾಮಕ್ಕೆ ಬಂದು ತಲುಪುವ ಕ್ರಾಂತಿಕಾರಿ ಪಾದಯಾತ್ರೆಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವ ಜೊತೆಗೆ, ರಾತ್ರಿ ಊಟ ಮತ್ತು ಮಾರ್ಚ್ 16ರ ಬೆಳಗಿನ ತಿಂಡಿ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದು, ಊರುಕೆರೆಯಿಂದ ಹೊರಡುವ ಪಾದಯಾತ್ರೆಯನ್ನು ತಮಟೆ ಸದ್ದಿನೊಂದಿಗೆ ನಗರದ ಶಿರಾಗೇಟ್‌ನ ಕಾಳಿದಾಸ ಸರ್ಕಲ್‌ನಲ್ಲಿ ಸ್ವಾಗತಿಸಲು ನಿರ್ಧರಿಸಲಾಯಿತು.
ಕ್ರಾಂತಿಕಾರಿ ಪಾದಯಾತ್ರೆಯನ್ನು ಡಿಸಿ ಕಚೇರಿ ಮುಂಭಾಗದಿಂದ ಸ್ವಾತಂತ್ರ್ಯ ಚೌಕದ ಮೂಲಕ ಟೌನ್‌ಹಾಲ್ ವೃತ್ತಕ್ಕೆ ಕರೆತರುವುದು. ಟೌನ್‌ಹಾಲ್ ಮುಂಭಾಗದಲ್ಲಿ ಒಂದು ಬಹಿರಂಗ ಸಭೆ ನಡೆಸಿ, ಊಟದ ನಂತರ ಕೆಲ ಕಾಲ ವಿಶ್ರಾಂತಿ ನಂತರ ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ವಾಸ್ತವ್ಯ ಹೂಡಲಿದೆ. ಮಾರ್ಚ 17ರ ಬೆಳಗ್ಗೆ ಸಿದ್ದಗಂಗಾ ಮಠದಿಂದ ಹೊರಡುವ ಕ್ರಾಂತಿಕಾರಿ ಪಾದಯಾತ್ರೆಯನ್ನು ಜಿಲ್ಲೆಯ ಗಡಿಯವರೆಗೆ ಕಳಿಸಿಕೊಡಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾದಿಗ ಪರ ಸಂಘಟನಗಳ ಮುಖಂಡರಾದ ಕೊಟ್ಟ ಶಂಕರ್, ರಂಗಧಾಮಯ್ಯ, ಪಿ.ಎನ್.ರಾಮಯ್ಯ, ಹಿರಿಯರಾದ ಮರಿಚನ್ನಮ್ಮ, ಬಂಡೆ ಕುಮಾರ್, ಡಾ.ರವಿಕುಮಾರ್ ನೀ.ಹ, ರಂಜನ್, ವಕೀಲ ಈ,ಶಿವಣ್ಣ, ಮೂರ್ತಿ, ಕೆಂಪರಾಜು, ಭಾನುಪ್ರಕಾಶ್, ಜೆಸಿಬಿ ವೆಂಕಟೇಶ್, ಗಣೇಶ್, ಕೇಬಲ ರಘು, ಕಿರಣ್‌ಕುಮಾರ್, ಗೋಪಾಲ್, ನಾಗರಾಜು, ಸಾಗರ್, ಲಕ್ಷಿö್ಮದೇವಯ್ಯ, ರಾಮಾಂಜಿ ಇದ್ದರು.