ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಈ ಸಲಿನ ಬಜೆಟ್ ಸಂಪೂರ್ಣ ರೈತ ವಿರೋಧಿ, ದಲಿತ ವಿರೋಧಿ, ಜನ ವಿರೋಧಿ, ಹಿಂದೂ ವಿರೋಧಿಯಾಗಿದೆ ಎಂದು ಆಪಾದಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ತುಮಕೂರಿನ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರಾಕ್ಟರ್ ರ್ಯಾಲಿ ನಡೆಸಿದ ಬಿಜೆಪಿ ಮುಖಂಡರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮತ ಬ್ಯಾಂಕ್ ರಾಜಕಾರಣಕ್ಕೋಸ್ಕರ ಅಲ್ಪಸಂಖ್ಯಾತರನ್ನು ಓಲೈಸಿರುವ ಹಿಂದೂ ವಿರೋಧಿ ಎಂದು ತಮ್ಮನ್ನು ಸಾಬೀತು ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಬಜೆಟ್‌ನಲ್ಲಿ ರೈತರು, ದಲಿತರು, ಜನಸಾಮಾನ್ಯರ ಹಿತವನ್ನು ಧಿಕ್ಕರಿಸಿ ವಂಚಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ದೇವರಾಜ ಅರಸು ಅವರ ಮುಖವಾಡ ಹೊತ್ತು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಸಿ ಸಿದ್ದರಾಮಯ್ಯ, ಅರಸು ಅವರ ಯಾವ ತತ್ವಗಳನ್ನೂ ಆಡಳಿತದಲ್ಲಿ ಅಳವಡಿಸಿಕೊಳ್ಳದೆ ಮುಸ್ಲೀಮರ ಓಲೈಕೆಯಲ್ಲಿ ತೊಡಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ. ಮತ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಇಂತಹ ಅನ್ಯಾಯ ಮಾಡುತ್ತಿರುವ ಸರ್ಕಾರವನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಧರಾಮಣ್ಣ, ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಹೆಚ್.ಎಂ.ರವೀಶಯ್ಯ, ಧನುಷ್, ಟಿ.ಹೆಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ಸಿ.ಎನ್.ರಮೇಶ್, ವಿಷ್ಣುವರ್ಧನ್, ಪುಟ್ಟರಾಜು, ಮಂಜುನಾಥ್, ಗಣೇಶ್‌ಪ್ರಸಾದ್, ಪ್ರೇಮಾ ಹೆಗಡೆ, ಲತಾಬಾಬು, ನಾಗರತ್ನಮ್ಮ, ಗಾಯತ್ರಿ, ವಸಂತ, ಶಿವಕುಮಾರ್, ವೆಂಕಟೇಶಾಚಾರ್, ರಾಜಶೇಖರ್, ಊರ್ಡಿಗೆರೆರವಿ, ನಿಸರ್ಗರಮೇಶ್, ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.