Saturday, March 15, 2025
Google search engine
Homeಚಳುವಳಿಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಲಿ: ನೇಮಿಚಂದ್ರ

ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಲಿ: ನೇಮಿಚಂದ್ರ

ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಗಂಡುಮಕ್ಕಳಲ್ಲಿ ಎಳವೆಯಲ್ಲೇ ಬಿತ್ತಬೇಕು. ಗಂಡ-ಹೆಂಡತಿ ಪರಸ್ಪರ ಗೌರವಿಸಿಕೊಂಡು ಬಾಳುವ ಮನೋಭಾವ ಬೆಳೆಯಬೇಕು ಎಂದು ಲೇಖಕಿ ನೇಮಿಚಂದ್ರ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಪರಿಸ್ಥಿತಿ ಮೊದಲಿಗಿಂತ ಈಗ ಸುಧಾರಿಸಿದೆ. ಆದರೆ ಸಮಾನತೆಯ ಸಂಸ್ಕೃತಿ ಇನ್ನೂ ನಮ್ಮಲ್ಲಿ ಪಕ್ವವಾಗಿಲ್ಲ ಎಂದರು.

ಹುಟ್ಟಿನಿಂದಲೇ ಯಾರೂ ಶ್ರೇಷ್ಠರಲ್ಲ, ಕನಿಷ್ಠರೂ ಅಲ್ಲ. ಸ್ತ್ರೀ-ಪುರುಷರ ವಿಷಯದಲ್ಲೂ ಇದು ಸರಿ. ಈ ಚಿಂತನೆ ಎಲ್ಲರಲ್ಲೂ ಮೂಡಿಬರಬೇಕು. ಆದರೆ ನಮ್ಮ ಸಮಾಜದ ದೃಷ್ಟಿಕೋನ ಬದಲಾಗಿಲ್ಲ. ಹೆಂಡತಿ ಗಂಡನಿಗೆ ವಿಧೇಯಳಾಗಿರಬೇಕು, ಗಂಡ ಹೆಂಡತಿಗೆ ಹೊಡೆಯುವುದು ಸರಿ ಎಂಬ ಮನಸ್ಥಿತಿ ಈಗಲೂ ಬಹುಪಾಲು ಇದೆ. ಹೀಗೆ ಭಾವಿಸುವವರಲ್ಲಿ ಮಹಿಳೆಯರೂ ಇದ್ದಾರೆ ಎಂಬುದು ಆಶ್ಚರ್ಯಕರ ಎಂದರು.

ಶೈಕ್ಷಣಿಕ ರಂಗದಲ್ಲಿ ಯಾವುದೇ ಪರೀಕ್ಷೆ ಫಲಿತಾಂಶ ಬಂದಾಗಲೂ ಬಾಲಕಿಯರದೇ ಮೇಲುಗೈ ಎಂದಿರುತ್ತದೆ. ಆಮೇಲೆ ಇವರೆಲ್ಲ ಎಲ್ಲಿ ನಾಪತ್ತೆಯಾಗುತ್ತಾರೆ ಎಂದೇ ತಿಳಿಯುವುದಿಲ್ಲ. ಅವಕಾಶಗಳ ಕೊರತೆ ಹಾಗೂ ಸಮರ್ಥ ಮಾದರಿಗಳ ಕೊರತೆಯೇ ಇದಕ್ಕೆ ಕಾರಣ. 120 ವರ್ಷಗಳ ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ವಿಜ್ಞಾನ ಕೇತ್ರದಲ್ಲಿ ಕೇವಲ 20 ಮಹಿಳೆಯರು ಮಾತ್ರ ನೊಬೆಲ್ ಪಡೆದಿದ್ದಾರೆ ಎಂದರು.

ಯಾವ ಕಂಪೆನಿಗಳ ಆಡಳಿತ ಮಂಡಳಿಗಳಲ್ಲಿ ಲಿಂಗವೈವಿಧ್ಯ ಇರುತ್ತದೋ, ಅದು ಹೆಚ್ಚು ಯಶಸ್ವಿಯಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಆದರೆ ನಮ್ಮಲ್ಲಿ ಇದರ ಕೊರತೆ ಇದೆ. 2010ರ ವೇಳೆಗೆ ಭಾರತದ ಕಂಪೆನಿಗಳ ಆಡಳಿತ ವಿಭಾಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.5ಕ್ಕಿಂತಲೂ ಕಡಿಮೆ ಇತ್ತು. ಇದು ಈಗ ಶೇ. 18ನ್ನು ದಾಟಿರುವುದು ಆಶಾದಾಯಕ ಎಂದರು.

ಸಮಾನತೆ ಇಲ್ಲದ ಸಂಸ್ಕೃತಿ ನಮ್ಮನ್ನು ಹೆಚ್ಚು ದೂರ ಕರೆದುಕೊಂಡು ಹೋಗುವುದಿಲ್ಲ. ಪ್ರಾಯೋಗಿಕವಾಗಿ ಜಾರಿಗೆ ಬರದ ಯಾವ ಸಿದ್ಧಾಂತಕ್ಕೂ ಅರ್ಥವಿಲ್ಲ. ಮಹಿಳೆಯರ ಕಾಲುಗಳನ್ನು ಕಟ್ಟಿಹಾಕಿ ನಿಮಗೆ ಗೆಲ್ಲಲು ಸಾಧ್ಯವಿಲ್ಲ ಎಂದು ನಂಬಿಸುವ ಸನ್ನಿವೇಶ ಇಂದಿಗೂ ಮುಂದುವರಿದಿದೆ. ಮಹಿಳೆಯರು ಈ ಬಂಧನಗಳಿಂದ ಮುಕ್ತವಾಗಿ ಅವರಿಗಾಗಿ ತೆರೆದಿರುವ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಕಲಾ ಕಾಲೇಜಿನ ಪ್ರಾಂಶುಪಾಲ ಬಿ. ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಶೇಟ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular