Thursday, January 29, 2026
Google search engine
Homeಮುಖಪುಟಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಯು

ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಯು

ತುಮಕೂರು:

ಭ್ರಷ್ಟಾಚಾರರಹಿತ, ನೈತಿಕ ರಾಜಕಾರಣವನ್ನು ನಂಬಿಕೊಂಡಿರುವ ಜೆಡಿ(ಯು), 2026ರಲ್ಲಿ ನಡೆಲಿರುವ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಮೊದಲು ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿರುವ ಉದ್ದೇಶ, ಪ್ರತಿ ಮತದಾರರನ್ನು ಅಭ್ಯರ್ಥಿ ಭೇಟಿಯಾಗಿ, ಮತಯಾಚಿಸಲಿ, ಹಣ, ಹೆಂಡ, ಇನ್ನಿತರ ಅಮಿಷಗಳ ಹೊರತಾಗಿಯೂ ಜನರು ವ್ಯಕ್ತಿ ನೋಡಿ ಮತ ಹಾಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಅಗಿದೆ ಎಂದರು.

ನಮ್ಮ ತಂದೆ ಜೆ.ಹೆಚ್.ಪಟೇಲ್, ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ರಾಜಕಾರಣವೆಂದರೆ ಕೇವಲ ಅಧಿಕಾರ ಎಂದು ಭಾವಿಸಿರಲಿಲ್ಲ. ಕೃಷಿ, ಪರಿಸರ, ಶಿಕ್ಷಣ, ಆಡಳಿತ, ಆರೋಗ್ಯ ಇವುಗಳೆಲ್ಲಾ ಉತ್ತಮವಾಗಿರಬೇಕು ಎಂದು ಬಯಸಿದ್ದರು. ಹಾಗಾಗಿಯೇ ಅವರ ಆಡಳಿತ ಕಾಲದಲ್ಲಿ ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಅದ್ಯತೆ ನೀಡಲಾಗಿತ್ತು. ಆದರೆ ಇಂದಿನ ರಾಜಕಾರಣ ಬದಲಾಗಿದೆ. ರಾಜಕಾರಣವೆಂದರೆ ಹಣ ಹೂಡಿ, ಹಣ ಮಾಡುವುದು ಎಂಬಂತಾಗಿದೆ. ಈ ಸ್ಥಿತಿ ಬದಲಾಗಬೇಕು ಎಂಬುದು ಜೆಡಿಯು ಕರ್ನಾಟಕದ ಆಶಯವಾಗಿದೆ. ಹಾಗಾಗಿಯೇ ಕರ್ನಾಟಕದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಸರ್ವೋದಯ ಎಂಬ ಪರಿಕಲ್ಪನೆಯಲ್ಲಿ ಹೊಸ ತಂಡವೊಂದನ್ನು ಕಟ್ಟಿ ಇಡೀ ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸರ್ವೋದಯ ಕರ್ನಾಟಕದ ಮೊದಲ ಪ್ರವಾಸ ಆಗ್ನೇಯ ಪದವಿಧರ ಕ್ಷೇತ್ರದ ವ್ಯಾಪ್ತಿಗೆ ಒಳಗೊಂಡಂತೆ ನಡೆಯಲಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರಾರಂಭಗೊಂಡಿದೆ. ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿದ್ಯಾವಂತ ಪದವಿಧರರಿಗೆ ಪಕ್ಷದ ಸಿದ್ದಾಂತ ತಿಳಿಸುವ ಜೊತೆಗೆ, ಮುಂದಿನ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿ ಆರಂಭಿಸುವುದು, ಹಾಗೆಯೇ ಸರ್ವೋದಯ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಡಾ.ಕೆ.ನಾಗರಾಜ ಅವರನ್ನು ಬೆಂಬಲಿಸುವಂತೆ ಮನವಿ ಮಾಡಲಾಗುವುದು ಎಂದರು.

ಆಗ್ನೇಯ ಪದವಿಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜ ಮಾತನಾಡಿ, ವೃತ್ತಿಯಲ್ಲಿ ವೈದ್ಯನಾಗಿದ್ದು, ವಿದ್ಯಾವಂತ ಯುವಜನತೆ ತಮ್ಮ ಗ್ರಾಮದ ಹತ್ತಿರದಲ್ಲಿಯೇ ತಾವು ಕಲಿತ ವಿದ್ಯೆಯ ಮೂಲಕ ದುಡಿಮೆ ಮಾಡಿ ಬದುಕಬೇಕೆಂಬ ಆಶಯದೊಂದಿಗೆ ಕುಂಬಾರರು, ಕಮ್ಮಾರರು ಸೇರಿದಂತೆ ವಿವಿಧ ಕಸುಬುಗಳ ಜನರನ್ನು ಒಗ್ಗೂಡಿಸಿ ಒಂದು ಕ್ಲಸ್ಟರ್ ಮಾಡಿ, ಸುಮಾರು 300 ಜನರಿಗೆ ಉದ್ಯೋಗ ನೀಡಲಾಗಿದೆ. ಇಂತಹ ಕ್ಲಸ್ಟರ್‌ಗಳು ಪ್ರತಿ ತಾಲೂಕಿನಲ್ಲಿಯೂ ಆಗಬೇಕು. ವಿದ್ಯಾವಂತರು ತಮ್ಮ ಮನೆ ಬಾಗಿಲಿನಲ್ಲಿಯೇ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಂಡು ಸಣ್ಣ ಸಣ್ಣ ಉದ್ಯಮ ಸ್ಥಾಪಿಸಲು ಬೇಕಾದ ನೆರವನ್ನು ಒದಗಿಸುವ ಕೆಲಸವನ್ನು ಸರ್ವೋದಯ ತಂಡ ಮಾಡುತ್ತಾ ಬಂದಿದೆ ಎಂದರು.

ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್., ಉಪಾಧ್ಯಕ್ಷೆ ಯಶೋಧ, ರೈತ ಘಟಕದ ಶ್ರೀನಿವಾಸಗೌಡ, ಮುಖಂಡರಾದ ಶಾಂತಕುಮಾರಿ, ಯುವ ಜನತಾದಳ (ಸಂಯುಕ್ತ)ದ ಬಿ.ಎಂ.ಪ್ರಭು, ಮೈನಾವತಿ, ಚಂದ್ರಶೇಖರ ಗಂಗು, ಕಲ್ಪನಾಗೌಡ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular