Thursday, January 29, 2026
Google search engine
Homeಮುಖಪುಟದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ-ಸಾಹಿತಿ ಡಾ.ಜಿ.ವಿ.ಆನಂದಮೂರ್ತಿ ಆತಂಕ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ-ಸಾಹಿತಿ ಡಾ.ಜಿ.ವಿ.ಆನಂದಮೂರ್ತಿ ಆತಂಕ

ಅಭಿವ್ಯಕ್ತಿ ಎನ್ನುವುದು ನಮಗೆ ಸಂವಿಧಾನ ಕೊಟ್ಟ ಅದ್ಬುತ ಕೊಡುಗೆ. ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ದಯವಾಗಿ ದಮನ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಡಾ.ಜಿ.ವಿ.ಆನಂದಮೂರ್ತಿ ಆತಂಕ ವ್ಯಕ್ತಪಡಿಸಿದರು.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ  ಬಹುಮುಖಿ ಬಳಗ, ಗೋಪಿಕಾ ಪ್ರಕಾಶನ ಬೆಂಗಳೂರು ವತಿಯಿಂದ ಹಡವನಹಳ್ಳಿ ವೀರಣ್ಣಗೌಡ ಅವರು ಬರೆದಿರುವ ‘ಉರಿವ ದೀಪದ ಕೆಳಗೆ’ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದಲ್ಲಿ ಅರಾಜಕ ಸ್ಥಿತಿ ಇದೆ. ದಮನಕಾರಿ ಪ್ರವೃತ್ತಿಗಳು ಇಡೀ ದೇಶದ ಉದ್ದಕ್ಕೂ ಕಂಡು ಬರುತ್ತಿವೆ. ನಮ್ಮ ಅಭಿಪ್ರಾಯಗಳನ್ನು ನಮ್ಮ ಭಿನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹ ಸಾಮಾಜಿಕ ವಾತಾವರಣ ದೇಶದಲ್ಲಿ ನಿರ್ಮಾಣವಾಗಿದೆ ಎಂದರು.

ಏಕರೂಪ ಸಂಸ್ಕೃತಿ. ಏಕ ವ್ಯಕ್ತಿಯ ಆಡಳಿತ, ಏಕ ವ್ಯಕ್ತಿಯ ಮಾತುಗಳು, ಇವೇ ಇಡೀ ದೇಶವನ್ನು ಆಕ್ರಮಿಸಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಸಾಹಿತ್ಯ ಕುರಿತು ಮಾತನಾಡುವುದು ಕಷ್ಟದ ಕೆಲಸವಾಗಿದೆ. ನಮ್ಮ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ ಹೇಗಿದೆಯೋ ಹಾಗೆ ಕನ್ನಡ ಸಾಹಿತ್ಯವೂ ಹೊರಗಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಇಡೀ ಪ್ರಪಂಚದಲ್ಲಿ ಅತ್ಯುತ್ತಮವಾದ ಅತ್ಯುನ್ನತವಾದ, ಪವಿತ್ರವಾದ ಕೆಲಸ ಎಂದರೆ ಅದು ಶಿಕ್ಷಕ ವೃತ್ತಿ. ಅದನ್ನು ಯಾರು ಸಮಗ್ರವಾಗಿ ನಿರ್ವಹಿಸುತ್ತಾರೆ ಅವರು ಈ ದೇಶಕ್ಕೆ ಅವರ ಅದ್ಬುತವಾದ ಕೊಡುಗೆಯನ್ನು ಕೊಡುತ್ತಾರೆ. ಶಿಕ್ಷಕರ ಕೈಕೆಳಗಿನ ವಿದ್ಯಾರ್ಥಿಗಳು ಸಮಾಜಕ್ಕೆ ಆಸ್ತಿಯಾಗುತ್ತಾರೆ. ಸಮಾಜವನ್ನು ಬದಲಾವಣೆ ಮಾಡುವ ಕೆಲಸ ಮಾಡುತ್ತಾರೆ. ಆ ಮಟ್ಟಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವವರು ಶಿಕ್ಷಕರು ಎಂದು ತಿಳಿಸಿದರು.

ಸಾಂಸ್ಕೃತಿಕ ಮಹತ್ವವನ್ನು ಕಟ್ಟುವಂತಹ ಕೆಲಸ ಮಾಡುವಂತಹ ಸಾಮರ್ಥ್ಯ ಶಿಕ್ಷಕರಿಗಿದೆ. ವಿದ್ಯಾರ್ಥಿಗಳು ದಾರಿ ತಪ್ಪದಂತೆ ನೋಡಿಕೊಳ್ಳುವ ಅವಕಾಶ ಶಿಕ್ಷಕರಿಗಿದೆ. ಅಧಿಕಾರಿ ಎಷ್ಟೇ ಚನ್ನಾಗಿ ಕೆಲಸ ಮಾಡಿದರೂ ಕೂಡ ಅದು ಸಮಾಜಕ್ಕೆ ಸೀಮಿತ. ಆದರೆ ಶಿಕ್ಷಕರು ಮಾಡಿದ ಕೆಲಸ ಅಗಾಧವಾದಂತಹದ್ದು. ಅಪರಿಮಿತವಾದಂತಹದ್ದು, ಅಂತಹ ಕೆಲಸವನ್ನು ಮಾಡುತ್ತಾರೆ ಎಂದರು.

ಪತ್ರಿಕೆಗಳು ಜನಪರವಾದಂತಹ ಯಾವ ಸುದ್ದಿಗಳನ್ನು ಬಿಂಬಿಸುತ್ತಿಲ್ಲ. ಇದು ಪತ್ರಿಕೆ ನೋಡುವವರಿಗೆ ಗೊತ್ತಾಗುತ್ತದೆ.ಗಣಿಗಾರಿಕೆ ಎಲ್ಲಾ ತಾಲೂಕುಗಳಲ್ಲೂ ನಡೆಯುತ್ತಿದೆ. ಇದರಿಂದಾಗಿ ಪ್ರಾಕೃತಿಕ ಸಂಪನ್ಮೂಲ ನಾಶವಾಗುತ್ತಿದೆ. ಇದರ ಬಗ್ಗೆ ಸಣ್ಣ ಲೇಖನಗಳು ಬರುವುದನ್ನು ಬಿಟ್ಟರೆ, ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತಹ ಬರಹಗಳು ಬರುತ್ತಿಲ್ಲ. ಯಾವ ಮಾಧ್ಯಮವೂ ಅದರ ಬಗ್ಗೆ ಎತ್ತಿಹಿಡಿಯುವಂತಹ ಕೆಲಸ ಮಾಡುತ್ತಿಲ್ಲ ಎಂಬ ನೋವು ಹೋರಾಟಗಾರರಲ್ಲಿದೆ ಎಂದು ಹೇಳಿದರು.

ಮುಟ್ಟಾದವರನ್ನು ಮನೆ ಒಳಗೆ ಇಟ್ಟುಕೊಳ್ಳುವುದಿಲ್ಲ. ಇದು ಮೌಢ್ಯದ ಪರಮಾವಧಿ. ಇದನ್ನು ಬಿಡಬೇಕೆಂದರೆ ಮನೆಯಲ್ಲಿ ಇಟ್ಟುಕೊಳ್ಳದೇ ಇರುವ ವ್ಯಕ್ತಿಗಳ ಮನಸ್ಸು ಬದಲಾವಣೆ ಆಗಬೇಕು. ಮಟ್ಟಿನ ಕಾರಣಕ್ಕೆ ಮನೆಯ ಹೊರಗಿಡುವುದು ಮೌಢ್ಯ. ಇದನ್ನು ಹೋಗಲಾಡಿಸಬೇಕು. ಇದರಿಂದ ಕೆಲವರಿಗೆ ಲಾಭ ಇದೆ. ಈ ಲಾಭವನ್ನು ಬಿಟ್ಟುಕೊಡಲು ತಯಾರಿಲ್ಲ. ಇದಕ್ಕೆ ಮನಃಪರಿವರ್ತನೆ ಮಾಡುವ ಕೆಲಸ ಆಗಬೇಕು ಎಂದರು.

ವಿಮರ್ಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀ.ಹ. ಕೃತಿಯ ಪರಿಚಯ ಮಾಡಿದರು. ಎಸ್.ಆರ್.ಗೋವಿಂದರಾಜು,  ಹಡವನಹಳ್ಳಿ ವೀರಣ್ಣಗೌಡ, ಹಿರಿಯ ಪತ್ರಕರ್ತ ಸಾ.ಚಿ.ರಾಜಕುಮಾರ ಮಂಜುನಾಥ ದಂಡಿನಶಿವರ, ಶಿಕ್ಷಕ ವಸಂತಕುಮಾರ್, ಕೆ.ಶಿವಮ್ಮ, ರಾಯಲ್ ರವಿ ಇದ್ದರು. ಕಲಾ ಕ್ಷೇತ್ರದ ಡಿ.ಎನ್.ದಿವಾಕರ, ಶಿಕ್ಷಣ ಕ್ಷೇತ್ರದ ರಾಮಯ್ಯ, ಪುಸ್ತಕೋದ್ಯಮದಲ್ಲಿ ಸಿದ್ದೇಶ್, ಅಗ್ನಿಶಾಮಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಧರಣೇಶ್ ಅವರನ್ನು ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular