ರೈತ ಹೋರಾಟಗಾರ ಹಾಗೂ ಮಾಜಿ ಶಾಸಕ ಪುಟ್ಟಣ್ಣಯ್ಯ ಅವರು ‘ತಾಯಿ ಹೃದಯವನ್ನು ಹೊಂದಿದ ನಾಯಕರಾಗಿದ್ದರು. ಸದಾ ರೈತರಿಗಾಗಿ ಹೋರಾಟ ಮಾಡುತ್ತಿದ್ದರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕೇಂದ್ರದ ಪುಟ್ಟಣ್ಣಯ್ಯ ಭವನದಲ್ಲಿ ಮಾಜಿ ಶಾಸಕ ಪುಟ್ಟಣ್ಣಯ್ಯ ಅವರ ಏಳನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪುಟ್ಟಣ್ಣಯ್ಯನವರು 40 ವರ್ಷಗಳ ಕಾಲ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದನದ ಒಳಗೆ ಶಾಸಕರಾಗಿ ರೈತರ ಪರವಾಗಿ ಮಾತನಾಡಿದರು. ದೇಶದ ಮತ್ತು ರಾಜ್ಯದ ರೈತರ ಸಮಸ್ಯೆಗಳ ಬಗೆಹರಿಸುವಂತೆ ಹೋರಾಟ ಮಾಡಿದರು. ಅಷ್ಟೇ ಅಲ್ಲ ರೈತರ ಮತ್ತು ಜನಸಾಮಾನ್ಯರ ದನಿಯಾಗಿ ಕೆಲಸ ಮಾಢಿದರು ಎಂದು ಸ್ಮರಿಸಿಕೊಂಡರು.
ಪುಟ್ಟಣ್ಣಯ್ಯ ಅವರು ಬಹಳಷ್ಟು ವರ್ಷಗಳ ಕಾಲ ನಮ್ಮೊಂದಿಗೆ ಇರಬೇಕಾಗಿತ್ತು. ಅವರು ಅನಾರೋಗ್ಯದ ಕಾರಣ ಮರಣ ಹೊಂದಿದರು ಎಂದು ಹೇಳಿದರು.
ಅವರು ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶಗಳಿದ್ದರೂ ಸಹ ಅದನ್ನು ನಿರಾಕರಿಸಿ ಅವರ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ದೃಷ್ಟಿಯಿಂದ ರೈತರ ಪರವಾಗಿ 40 ವರ್ಷಗಳ ಕಾಲ ಸುದೀರ್ಘ ಹೋರಾಟ ಮಾಡಿಕೊಂಡು ಬಂದರು. ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ತಾಲ್ಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಕಾರ್ಯದರ್ಶಿ ತಿಮ್ಮೇಗೌಡ, ಕೊರಟಗೆರೆ ತಾಲ್ಲೂಕಿನ ಮಹಮದ್ ಶಬ್ಬೀರ್ ಇದ್ದರು.