ಬಹುಜನ ಸಮಾಜ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷರನ್ನಾಗಿ ಕ್ರಿಯಾಶೀಲ ಯುವಕ ಎಂ.ಎಂ. ಆಂಜನಮೂರ್ತಿ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕರ್ನಾಟಕ ಉಸ್ತುವಾರಿ ರಾಜರಾಂ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಬಿಎಸ್.ಪಿ ರಾಜ್ಯ ಸಂಯೋಜಕ ಅಶೋಕ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿಗಳಾದ ಶೂಲಯ್ಯ, ರುದ್ರಪ್ಪ ಅವರ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ನೇಮಕಾತಿ ಆದೇಶ ಪತ್ರವನ್ನು ಆಂಜನಮೂರ್ತಿ ಅವರಿಗೆ ನೀಡಲಾಯಿತು.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಸರಪಡಿ ಗ್ರಾಮದವರಾದ ಆಂಜನಮೂರ್ತಿ ದಿ ನ್ಯೂಸ್ ಕಿಟ್.ಕಾಂ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸಲಾಗುವುದು. ಹಿಂದುಳಿದವರು ಮತ್ತು ದಲಿತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ ಶಿರಾ, ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಲ್ಲಿ ಪಕ್ಷದ ಅಧ್ಯಕ್ಷರಿದ್ದು, ಉಳಿದ ತಾಲೂಕುಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಜಿಲ್ಲೆಯ ಕೆಲವು ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಈ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸುತ್ತೇನೆ. ಜೊತೆಗೆ ಪಕ್ಷದಲ್ಲಿರುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಕಟ್ಟುತ್ತೇನೆ ಎಂದರು.


