ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಿಕ್ಷಣವೇ ಬುನಾದಿಯಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಭಾಷೆ, ಬರವಣಿಗೆ, ಕೌಶಲ್ಯ, ಸಾಮಾನ್ಯಜ್ಞಾನವನ್ನು ಈ ಹಂತದಲ್ಲೇ ಪಡೆದುಕೊಂಡಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಜ್ಞಾನ ಮಲ್ಲಿಕಾ-ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ‘ಮಕ್ಕಳೊಡನೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾಥಿಗಳಲ್ಲಿ ಬದ್ಧತೆ, ಕೌಶಲ್ಯ, ವ್ಯವಹಾರಿಕ ಜ್ಞಾನ, ಹಿರಿ-ಕಿರಿಯರಿಗೆ ಗೌರವಕೊಡುವುದನ್ನು ಕಲಿಸುವುದು, ಗ್ರಾಮೀಣ ಪ್ರದೇಶದ ಪಾಠ ಶಾಲೆಗಳೆಂದರೆ ಹಳ್ಳಿಗಳು, ಪ್ರಾಥಮಿಕ ಶಿಕ್ಷಣ ಉತ್ತಮವಾಗಿ ಬಿದ್ದರೆ ಜ್ಞಾನದ ಸೌಧವನ್ನು ಸುಲಭವಾಗಿ ಕಟ್ಟಬಹುದು ಎಂದರು.
ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶಿಕ್ಷಕರು ಪಠ್ಯ ಪುಸ್ತಕ ಬೋಧನೆ, ಟೀಚಿಂಗ್ ಗೈಡ್ಸ್ ಮೂಲಕ ಬೋಧನೆ, ಸ್ಮಾರ್ಟ್ಕ್ಲಾಸ್ ಬೋಧನೆ, ವಿಜ್ಞಾನದ ಮಾದರಿಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸುವುದು, ನಾಟಕ, ಕರಕುಶಲ ವಸ್ತುಗಳ ತಯಾರಿಕೆ, ಫೆಸ್ಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳಿಗೆ ವೇದಿಕೆ ಕಾರ್ಯಕ್ರಮಗಳನ್ನು ಕಲ್ಪಿಸುವುದರಿಂದ ಧೈರ್ಯದ ಜೊತೆಗೆ ಭಾಷೆಯನ್ನು ಸಂಬೋಧಿಸುವ, ಮಾತನಾಡುವ ಕೌಶಲ್ಯ ಮಕ್ಕಳಲ್ಲಿ ಬೆಳವಣಿಗೆಯಾಗುತ್ತದೆ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಸಹಕಾರಿಯಾಗುತ್ತದೆ, ಮಕ್ಕಳಲ್ಲಿ ಕಂಠಪಾಠ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸುವುದರಿಂದ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎಂದು ತಿಳಿಸಿದರು.
ಈಗ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಇಂಗ್ಲೀಷ್ ಭಾಷೆಯೇ ಹೆಚ್ಚು ಪ್ರಧಾನವಾಗುತ್ತಿದೆ. ಇಂತಹ ಕಾಲದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಲು, ಇತರೆ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾಗಿದೆ. ಹೀಗಾಗಿ ಇಂಗ್ಲೀಷ್ ಜ್ಙಾನದ ಅರಿವು ಬಹುಮುಖ್ಯವಾಗಿದೆ. ಮಾತೃಭಾಷೆಯ ಜ್ಞಾನದ ಜೊತೆಗೆ ಇಂಗ್ಲೀಷ್ ಭಾಷೆಯ ಜ್ಞಾನವೂ ಮುಖ್ಯ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ವಿಷಯದೊಂದಿಗೆ ಸಾಮಾನ್ಯ ಜ್ಞಾನ, ತಂತ್ರಜ್ಞಾನದ ವಿಷಯ ಒಳಗೊಂಡಿರುವುದರಿಂದ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗಿ ಪಠೇತರ ಪುಸ್ತಕಗಳು, ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು, ತಿಳಿದುಕೊಂಡ ವಿಷಯಗಳನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು, ಇದರಿಂದ ಜ್ಞಾನಾರ್ಜನೆಯಾಗಲಿದೆ. ಇದು ಮುಂದಿನ ದಾರಿ ಕಂಡುಕೊಳ್ಳಲು ಅವಕಾಶ ಒದಗಿಸುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ಒಲವು ಮತ್ತು ಬದ್ಧತೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತ ಸಿಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪತ್ರಕರ್ತ ವೆಂಕಟಾಚಲ.ಹೆಚ್.ವಿ. ಪ್ರಾಸ್ತಾವಿಕ ಮಾತನಾಡಿದರು, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಮುಖ್ಯೋಪಾಧ್ಯಾಯ ಗಂಗಾಧರ, ವಕೀಲ ಕೆ.ಎಸ್.ರಾಘವೇಂದ್ರ ಇದ್ದರು.


