ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಓರ್ವ ಪಲಾಯನವಾದಿ ರಾಜಕಾರಣಿ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ವಾಗ್ದಾಳಿ ನಡೆಸಿದ್ದಾರೆ
ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅವರು, 2023ರ ವಿಧಾನಸಭಾ ಚುನಾವಣೆಯ ವೇಳೆ ಮತದಾರರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸಿಲ್ಲ. ನನ್ನ ಕಾಲದಲ್ಲಿ ಮಂಜೂರಾದ ಜೆ.ಜೆ.ಎಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿರುವುದು ಬಿಟ್ಟರೆ ಒಂದು ನೈಯಾ ಪೈಸೆ ಅನುದಾನ ತಂದಿಲ್ಲ ಎಂದು ಟೀಕಿಸಿದರು.
ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ಥಾನ ಮಾಡಿ ಬಂದ ಮೇಲಾದರೂ ಬದಲಾಗಿದ್ದಾರೆ ಎಂದುಕೊಂಡಿದ್ದೆ. ಅವರು ಮತ್ತೆ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾರೆ. ಅವರ ಹಳೆಯ ಚಾಳಿಯನ್ನು ಬಿಡುವಂತೆ ಮಾಡಲು ರಾಜ್ಯ ಸರಕಾರ ಟಿ.ನರಸೀಪುರ ತಾಲೂಕಿನ ತಿರುಮಕೂಡಲದಲ್ಲಿ ಹಮ್ಮಿಕೊಂಡಿರುವ ಕುಂಭ ಮೇಳಕ್ಕೆ ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಕುಟುಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಟೀಕಿಸುವ ಮೂಲಕ ಅವರ ತೇಜೋವಧೆಗೆ ಯತ್ನಿಸುತ್ತಿರುವುದು ಗ್ರಾಮಾಂತರ ಶಾಸಕರಿಗೆ ಶೋಭ ತರುವುದಿಲ್ಲ. 150 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಎತ್ತಿನ ಹೊಳೆ ಯೋಜನೆಗೆ 350 ಕೋಟಿ ರೂ ಹೆಚ್ಚುವರಿ ಅನುದಾನ ನೀಡಿದೆ. ತುಮಕೂರು ನಗರಕ್ಕೆ 200 ಕೋಟಿ ರೂ ವಿಶೇಷ ಅನುದಾನ ನೀಡಲಾಗಿದೆ. ನೀವೇ ಗುದ್ದಲಿ ಪೂಜೆ ನೆರವೇರಿಸಿದ ಬೆಳ್ಳಾವಿ ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಅನುದಾನ ನೀಡಿದ್ದು ಯಾರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ ಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಬಗ್ಗೆ ಹಗುರವಾಗಿ ಮಾತನಾಡುವುದನ್ನೇ ಚಟವಾಗಿ ಮಾಡಿಕೊಂಡಿರುವ ಶಾಸಕ ಬಿ.ಸುರೇಶಗೌಡ, ಪ್ರಚಾರಕ್ಕಾಗಿ ಸರಕಾರವನ್ನು ಹಿಯಾಳಿಸುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಸಿದ್ದಾರ್ಥ ಕಾಲೇಜಿಗೆ ಬಂದು ಹೋಗುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡುವ ಸುರೇಶಗೌಡ, ಬೆಳಗಾದ ತಕ್ಷಣ, ಡಾ.ಜಿ.ಪರಮೇಶ್ವರ್ ಮನೆಗೆ ಹೋಗಿ ಕುಳಿತಿರುತ್ತಾರೆ. ಈ ರೀತಿಯ ದ್ವಂದ್ವ ಬಿಡಿ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಸುಲ್ತಾನ್ ಮೊಹಮದ್, ಆರ್.ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫೈಯಾಜ್, ಷಣ್ಮುಗಪ್ಪ ಇತರರು ಇದ್ದರು.


