Thursday, January 29, 2026
Google search engine
Homeಮುಖಪುಟನರೇಗಾ ಹಬ್ಬ 2025 : ತುಮಕೂರು ಜಿಲ್ಲೆಗೆ 3 ಪ್ರಶಸ್ತಿ

ನರೇಗಾ ಹಬ್ಬ 2025 : ತುಮಕೂರು ಜಿಲ್ಲೆಗೆ 3 ಪ್ರಶಸ್ತಿ

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿಕೆ, ಶಾಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜಿಲ್ಲೆಯ ವಿನೂತನ ಕಾರ್ಯಕ್ರಮಗಳನ್ನು ಪರಿಗಣಿಸಿ ತುಮಕೂರು ಜಿಲ್ಲಾ ಪಂಚಾಯಿತಿಗೆ 2025ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ಹಾಗೂ ಕಾಯಕ ಬಂಧು ಗಂಗಮ್ಮ ಅವರಿಗೆ ಮೇಟ್ ಪ್ರಶಸ್ತಿ ಸೇರಿ 3 ಪ್ರಶಸ್ತಿಗಳು ಲಭಿಸಿವೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅವರು ಪ್ರಶಸ್ತಿ ಸ್ವೀಕರಿಸಿದರು.

ನರೇಗಾ ಯೋಜನೆಯಡಿ ಜಿಲ್ಲೆಗೆ 2023-24ನೇ ಸಾಲಿಗಾಗಿ 42 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, 63 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯು ಶೇಕಡ 150ರಷ್ಟು ಸಾಧನೆ ಮಾಡಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ರಸ್ತೆ, ಚರಂಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆದ್ಯತೆ ಮೇರೆಗೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಅಲ್ಲದೆ 2023-24ನೇ ಸಾಲಿನಲ್ಲಿ 123 ಕೋಟಿ ರೂ.ವೆಚ್ಚದಲ್ಲಿ 4015 ಶಾಲಾ ಅಭಿವೃದ್ಧಿ, 98 ಕೋಟಿ ರೂ. ವೆಚ್ಚದಲ್ಲಿ 2080 ರಸ್ತೆ ಕಾಮಗಾರಿ, 85 ಕೋಟಿ ರೂ. ವೆಚ್ಚದಲ್ಲಿ 2069 ಚರಂಡಿ ಕಾಮಗಾರಿ, 12 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ಸಂಜೀವಿನಿ ಭವನ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ.

ಉಜ್ಜಿನಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ:

ಕುಣಿಗಲ್ ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಗೆ 2025ರ ನರೇಗಾ ಹಬ್ಬದಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ದಕ್ಕಿದೆ. 2023-24ನೇ ಸಾಲಿನಲ್ಲಿ 75,000 ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಉಜ್ಜಿನಿ ಗ್ರಾಮ ಪಂಚಾಯಿತಿಗೆ ಈ ಪ್ರಶಸ್ತಿ ಸಿಕ್ಕಿದೆ.

ಪಾವಗಡ ಗಂಗಮ್ಮಗೆ ಒಲಿದ ಮೇಟ್ ಪ್ರಶಸ್ತಿ :

ಪಾವಗಡ ತಾಲೂಕಿನ ಸಿಕೆ ಪುರ ಗ್ರಾಮ ಪಂಚಾಯಿತಿಯ ಗಂಗಮ್ಮ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 329 ಕುಟುಂಬಗಳಿಗೆ ಉದ್ಯೋಗ ಕೊಡಿಸಿದ್ದು, ಇದರಲ್ಲಿ 246 ಕುಟುಂಬಗಳು 100 ದಿನಗಳ ನರೇಗಾ ಕೂಲಿಯನ್ನು ಮುಗಿಸುವಲ್ಲಿ ಯಶಸ್ವಿಯಾಗಿವೆ. ಈ ಕಾರಣದಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಪಡಿಸುವ ನಿಟ್ಟಿನಲ್ಲಿ ಸಾಧನೆ ಮಾಡಿದ ಗಂಗಮ್ಮನವರಿಗೆ ಮೇಟ್(ಕಾಯಕ ಬಂಧು) ಪ್ರಶಸ್ತಿ ಲಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular