Saturday, February 1, 2025
Google search engine
Homeಮುಖಪುಟಒಳಮೀಸಲಾತಿ ಜಾರಿಗೆ ಆಗ್ರಹಿಸಿ ಜ.29ರಂದು ಪ್ರತಿಭಟನೆ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಜ.29ರಂದು ಪ್ರತಿಭಟನೆ

ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಆದೇಶದ ನಂತರವೂ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಜ. 29ರಂದು ರಾಜ್ಯದ ಎಲ್ಲಾ ಡಿಸಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮಾದಿಗ ಸಮುದಾಯಗಳ ಸ್ವಾಭಿಮಾನಿ ಒಕ್ಕೂಟ ತೀರ್ಮಾನಿಸಿದೆ ಎಂದು ದಸಂಸ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಿ, ಸಾಮಾಜಿಕ ನ್ಯಾಯ, ಅಹಿಂದ ಎಲ್ಲವೂ ಮುಖವಾಡ. ಒಳಮೀಸಲಾತಿ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಸಿದ್ದರಾಮಯ್ಯ ಕೈ ಬಿಡಬೇಕು. ಮಾದಿಗ ಸಮಾಜವನ್ನು ದಾರಿ ತಪ್ಪಿಸಬಾರದು ಎಂದು ಎಚ್ಚರಿಸಿದರು.

2011 ಮತ್ತು 2021ರಲ್ಲಿ ನಡೆದಿರುವ ಜನಗಣತಿಯೇ ಹೊರತು ಜಾತಿ ಗಣತಿಯಲ್ಲ. ಈ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಒಳಮೀಸಲಾತಿ ಜಾರಿ ಮಾಡಲು ಹೊರಟರೆ ಮಾದಿಗ ಮತ್ತು ಅದರ ಉಪಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ. ಹಾಗಾಗಿ, ಎ.ಜೆ.ಸದಾಶಿವ ಆಯೋಗದ ವರದಿಯಂತೆ ಕನಿಷ್ಠ ಶೇ7ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು. ಈ ಬಗ್ಗೆ ಸರಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಜನವರಿ 29 ರಂದು ರಾಜ್ಯದ ಎಲ್ಲಾ ಡಿಸಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಪ್ರತಿ ಮನೆ ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ, ವರದಿ ಸಲ್ಲಿಸಿದೆ. ಈ ವರದಿಯನ್ನೇ ಅಂಗೀಕರಿಸಿ, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಒಳಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗವಾಗಿದ್ದು, ಇದನ್ನು ಅರ್ಥ ಮಾಡಿಕೊಂಡು, ನಿಗದಿತ ಅವಧಿಯೊಳಗೆ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.

ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷ ಗುರುಮೂರ್ತಿ ಮಾತನಾಡಿ, ಸಚಿವ ಸಂಪುಟದ ನಿರ್ಣಯದಂತೆ ಒಳಮೀಸಲಾತಿ ಜಾರಿಯವರೆಗೆ ಸರಕಾರಿ ಉದ್ಯೋಗಗಳನ್ನು ತುಂಬಬಾರದು. ನಿಜವಾದ ಅಲೆಮಾರಿ ಸಮುದಾಯಗಳನ್ನು ಗುರುತಿಸಿ, ಅವರಿಗೆ ಶೇ1ರ ಮೀಸಲಾತಿಯ ಜೊತೆಗೆ, ಅವರ ಅಭಿವೃದ್ದಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಸರಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಗುವುದು ಎಂದರು.

ದಸಂಸ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ, ಎಂಆರ್‌ಹೆಚ್‌ಎAನ ಜಿಲ್ಲಾ ಉಪಾಧ್ಯಕ್ಷ ಸತ್ಯಪ್ಪ, ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಕೊರಟಗೆರೆ ತಾಲೂಕು ಉಪಾಧ್ಯಕ್ಷ ಗಂಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular