Sunday, February 16, 2025
Google search engine
Homeಮುಖಪುಟಸರ್ಕಾರಿ ಶಾಲೆ ಉಳಿಸಲು ಮಾರ್ಗೋಪಾಯ ಕಂಡುಕೊಳ್ಳಬೇಕು

ಸರ್ಕಾರಿ ಶಾಲೆ ಉಳಿಸಲು ಮಾರ್ಗೋಪಾಯ ಕಂಡುಕೊಳ್ಳಬೇಕು

ಪ್ರವೇಶಾತಿ ಕೊರತೆಯಿಂದ ಅತೀ ವೇಗದಲ್ಲಿ ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಮಾರ್ಗೋಪಾಯ ಕಂಡುಕೊಳ್ಳಲು ಮತ್ತು ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಸಹವರ್ತಿ ಕನ್ನಡ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ತುಮಕೂರಿನ ಕನ್ನಡ ಭವನದಲ್ಲಿ ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಹತ್ತನೆ ತರಗತಿ ನಂತರ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಕನ್ನಡ ಮಾಧ್ಯಮ ಇಲ್ಲದ ಕಾರಣ ಮಕ್ಕಳು ಕ್ರಮೇಣ ಖಾಸಗಿ ಕ್ಷೇತ್ರದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರುತ್ತಿದ್ದಾರೆ. ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸುವ ಇಂಜಿನಿಯರಿಂಗ್, ವೈದ್ಯಕೀಯ, ವಾಣಿಜ್ಯ, ವಿಜ್ಙಾನ ಕ್ಷೇತ್ರಗಳಿಗೆ ಪ್ರವೇಶ ಪಡೆಯಲು ವಿಫಲರಾಗುವ ಕಾರಣದಿಂದ ಉನ್ನತ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಯಿತು.

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಾಗಿರುವ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹುದ್ದೆಗಳು ಖಾಲಿಯಿದ್ದರೆ, ಪ್ರೌಢಶಾಲೆಗಳಲ್ಲಿ 9,705 ಇವೆ. ಹೆಚ್ಚುವರಿಯಾಗಿ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದ ನಿರ್ವಹಿಸುತ್ತಿವೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಿಂದಲೇ ನೇಮಕ ಮಾಡಿ ಸರ್ಕಾರಿ ಶಾಲಾ ಶಿಕ್ಷಣವನ್ನು ಬಲಿಷ್ಟಗೊಳಿಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.

ಶಿಕ್ಷಕರನ್ನು ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟವನ್ನೂ ಒಳಗೊಂಡಂತೆ ಹಲವು ಶಿಕ್ಷಣೇತರ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಸರ್ಕಾರಿ ಶಾಲಾ ಶಿಕ್ಷಣವನ್ನು ದುರ್ಬಲಗೊಳಿಸಲಾಗುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು, ಸಾರ್ವಜನಿಕಜನಿಕ ಶಿಕ್ಷಣದ ಸರ್ಕಾರಿ ಶಾಲಾ ವ್ಯವಸ್ಥೆಯ ಈ ಅರಾಜಕತೆಯನ್ನು ಕಂಡು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕಿತರಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂರು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟು, ಆಯಾ ಕ್ಷೇತ್ರದ ಶಾಸಕರ ಮುಖಾಂತರ ಈ ಹಕ್ಕೋತ್ತಾಯ ಜಾರಿಗೊಳಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಚಿಂತಕ ಕೆ. ದೊರೈರಾಜು, ಪರಿಸರವಾದಿ ಸಿ.ಯತಿರಾಜು, ಲೇಖಕ ಕೆ.ಪಿ.ನಟರಾಜ, ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ, ಕತೆಗಾರ ಗಂಗಾಧರಯ್ಯ, ಸಾಮಾಜಿಕ ಕಾರ್ಯಕರ್ತ ಕೆ.ಗೋವಿಂದಯ್ಯ, ಸುರೇಶ್‌ ದೇವರಹೊಸಹಳ್ಳಿ, ನಿವೃತ್ತ ಪ್ರಾಧ್ಯಾಪಕ ತಿಮ್ಮನಹಳ್ಳಿ ವೇಣುಗೋಪಾಲ್, ಗ್ರಾಮ ಪಂಚಾಯತಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಹಳ್ಳಿ ಸತೀಶ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular