ತೀವ್ರ ಕುತೂಹಲ ಮೂಡಿಸಿದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ.ವೆಂಕಟೇಶ್ ಆಯ್ಕೆ ಆಗಿದ್ದಾರೆ.
ಸರ್ಕಾರದಿಂದ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದ ಶಾಸಕ ಹೆಚ್.ವಿ.ವೆಂಕಟೇಶ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಎನ್.ಡಿ.ಎ ಬೆಂಬಲಿತ ಅಭ್ಯರ್ಥಿಯಾಗಿ ಶಿರಾ ಕ್ಷೇತ್ರದ ಎಸ್.ಆರ್.ಗೌಡ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು 9ಮತಗಳನ್ನು ಪಡೆದ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಎಸ್.ಆರ್.ಗೌಡ 5 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ.
ಮಧುಗಿರಿ ಕ್ಷೇತ್ರದ ನಾಗೇಶಬಾಬು ಮತ್ತು ಗುಬ್ಬಿ ಕ್ಷೇತ್ರದ ಕೆ.ಪಿ.ಭಾರತಿದೇವಿ ನಡುವೆ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡದಿತ್ತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ನಾಗೇಶ್ ಬಾಬು ಅವರನ್ನು ಬೆಂಬಲಿಸಿದ್ದರು. ಗುಬ್ಬಿಯ ಭಾರತೀ ದೇವಿ ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಗಡಿನಾಡು ಪಾವಗಡದ ಶಾಸಕ ಹೆಚ್.ವಿ.ವೆಂಕಟೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುಮುಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವ್ ಮೇಲುಗೈ ಸಾಧಿಸಿದ್ದಾರೆ.


