ಭಾಷೆಗಳ ಅವಸಾನ, ಸಮುದಾಯಗಳ ಅವಸಾನ ಮತ್ತು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತೀಯ ತತ್ವಶಾಸ್ತ್ರದ ಪತನ. ಈ ಮೂರು ಕೂಡ ಅವಸಾನದ ಅಂಚಿಗೆ ಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ತುಂಬಾಡಿ ರಾಮಯ್ಯ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ ತುಂಬಾಡಿ ರಾಮಯ್ಯ ಅವರ ಆತ್ಮಕಥನ ‘ಮಣೆಗಾರ’-25 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯಗಳ ಒಳಗಡೆ ಬಡತನ ಅಥವಾ ಅನೇಕ ಕಾರಣಗಳಿಗಾಗಿ ಹುಟ್ಟುವಂತಹ ಕ್ರೌರ್ಯವನ್ನು ಅನೇಕ ಬರೆಹಗಾರರು ಆತ್ಮಚರಿತ್ರೆ ಮತ್ತು ಕತೆಗಳ ಮೂಲಕ ಹೇಳಿದ್ದಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಅರವಿಂದ ಮಾಲಗತ್ತಿ ಅವರ ಕಾರ್ಯ ಕಾದಂಬರಿ. ಚಾರಿತ್ರಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಹುಟ್ಟಿಕೊಳ್ಳುವಂತಹ ಕ್ರೌರ್ಯ ಭಾಷೆಯಲ್ಲಿ ಹಿಡಿದಿಡುವಂತಹ ಕ್ರಮ 1975ರಲ್ಲಿ ಆಯಿತು ಎಂದು ಹೇಳಿದರು.
ತುಂಬಾಡಿ ರಾಮಯ್ಯ ಅವರು ತಮ್ಮ ಮಣೆಗಾರ ಕೃತಿಯ ಮೂಲಕ ಮೂರು ವಿಶಿಷ್ಟವಾದ ಬರವಣಿಗೆಯ ಕ್ರಮಗಳನ್ನು ಮಣೆಗಾರದಲ್ಲಿ ಸಮ್ಮಿಶ್ರಗೊಳಿಸಿ ತನ್ನದೇ ಆದಂತಹ ಒಂದು ಮಾದರಿಯನ್ನು ಕೊಟ್ಟಿದ್ದಾರೆ. ಇದು ತುಂಬಾಡಿ ರಾಮಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆ. ಇದರಲ್ಲಿ ಕಾಮಿಕ್ ಇದೆ. ಕ್ರೌರ್ಯದ ಕೆಲವು ಮಾತುಗಳು ಇವೆ. ಇದರಲ್ಲಿ ನಾವು ಯೋಚಿಸಬೇಕಾದ ಬಹಳ ಗಂಭೀರವಾದ ಪ್ರಶ್ನೆಗಳು ಇವೆ. ಹಾಗಾಗಿ ನಾನು ಸರಳವಾಗಿ ಈ ಮೂರು ವರ್ಗಗಳನ್ನು ಅಲ್ಲಗೆಳೆಯುವ, ಆದರೆ ಆ ಕೆಟಗರಿಯ ಅತ್ಯುತ್ತಮ ಅಂಶಗಳನ್ನು ಒಳಗೊಂಡಿರುವ ಬಹಳ ಅಮೂಲ್ಯವಾದಂಥ ಕೃತಿ ಮಣೆಗಾರ. ಈ ಥರದ ಲೋಕವನ್ನು ಪ್ರವೇಶಿಸಬೇಕಾದರೆ ನಾವು 20ನೇ ಶತಮಾನದ ಕೊನೆಯ ಭಾಗದವರೆಗೆ ಬರಬೇಕಾಯಿತು ಎಂದರು.

ದಲಿತರು ಅಕ್ಷರಲೋಕಕ್ಕೆ ಬಂದ ಸಂದರ್ಭದಲ್ಲಿ ಅನಾವರಣಗೊಂಡ ಒಂದು ಲೋಕ ಇದೆಯಲ್ಲಾ, ಅದು ನಾವು ಎಳವೆಯಲ್ಲಿ ನೋಡುತ್ತಿದ್ದಂಥಕ್ಕೆ ವಿರುದ್ಧವಾಗಿ ವಾಸ್ತವ ಲೋಕಕ್ಕೆ ಹತ್ತಿರವಾಗಿ ಭಾರತೀಯ ಸಂಸ್ಕೃತಿಯ ಇನ್ನೊಂದು ಮುಖವನ್ನು ತೆರೆದು ನಮ್ಮ ಮುಖಕ್ಕೆ ರಾಚಿತು. ಇದರಿಂದ ಸಂತೋಷಪಡಬೇಕೋ, ನಾಚಿಕೆಪಡಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಮಣೆಗಾರ ಪುಸ್ತಕದ ಕೊನೆಯ ಭಾಗದಲ್ಲಿ ಕಾಣಬರುವ ನೈತಿಕತೆ, ಇದನ್ನು ದಲಿತ ನೈತಿಕತೆ ಎಂದು ಕರೆಯಬಹುದೇನೋ ನನಗೆ ಗೊತ್ತಿಲ್ಲ. ಮಾನವೀಯ ನೈತಿಕತೆ ಇದೆ. ಇದು ಎಲ್ಲಿಂದ ನಿಷ್ಪನ್ನವಾಯಿತು, ನಮ್ಮ ಸಂಸ್ಕೃತಿಯ ಯಾವ ಸಂದರ್ಭದಲ್ಲಿ ನಿಷ್ಪನ್ನವಾಯಿತು ಎಂಬುದನ್ನು ನಾವು ಮತ್ತೆ ಮತ್ತೆ ಪರಿಶೀಲಿಸಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.
ಹೆಸರಾಂತ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಕೃತಿಯ ಕುರಿತು ಮಾತನಾಡಿ, ಈಗಿನ ಸಂದರ್ಭದಲ್ಲಿ ಹೆಣ್ಣಿನ ಮತ್ತು ದಲಿತರ ಹೋರಾಟ ಬಹಳ ಭಿನ್ನವಾಗಿದೆ. ಸುಮಾರು 25 ವರ್ಷದ ಹಿಂದೆಯೇ ತುಂಬಾಡಿ ರಾಮಯ್ಯ ಅವರು ಈ ಭಿನ್ನ ದಾರಿಯನ್ನು ತುಳಿದಿದ್ದಾರೆ. ಇವತ್ತು ದಲಿತರು ಮತ್ತು ಹೆಣ್ಣು ಮಕ್ಕಳು ಇದೇ ನಮ್ಮ ದಾರಿ ಎಂದು ಗುರುತಿಸಿಕೊಂಡು ಮುಂದೆ ಹೋಗುತ್ತಿದ್ದಾರೆ. ನಾವು ಈಗ ಮತ್ತು ಮುಂದೆ ನಡೆಯಬೇಕಾಗಿರುವ ದಾರಿಯನ್ನು 25 ವರ್ಷದ ಹಿಂದೆಯೇ ಉದ್ಘಾಟಿಸಿದ್ದೀರಿ. ಆಗಲೇ ಗುರುತಿಸಬೇಕಾಗಿತ್ತು. ಆದರೆ ಆ ಕಾರ್ಯ ಈ ನೆರವೇರುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯ ಕಲಾವಿದ ಡಾ.ಎಂ.ಎಸ್.ಮೂರ್ತಿ, ಮಣೆಗಾರ ಕೃತಿಯ ಕರ್ತೃ ತುಂಬಾಡಿ ರಾಮಯ್ಯ, ಪತ್ರಕರ್ತ ಚ.ಹ.ರಘುನಾಥ್, ಚರಕ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸವರಾಜು, ಹಿಂದುಳಿದ ವರ್ಗಗಳ ಯುವ ವೇದಿಕೆ ಅಧ್ಯಕ್ಷ ಡ್ಯಾಗೇರಹಳ್ಳಿ ವಿರೂಪಾಕ್ಷ, ಡಿವಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ನಿತ್ಯಾನಂದ ಶೆಟ್ಟಿ, ಇಂಜಿನಿಯರ್ ಶಿವಕುಮಾರ್ ಇದ್ದರು.


