Friday, January 30, 2026
Google search engine
Homeಮುಖಪುಟಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿದ್ದ ಬರಗೂರು

ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿದ್ದ ಬರಗೂರು

ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಷ್ಟೇ ಸಿಮೀತವಾಗದೆ, ಅದರ ಆಚೆಗೂ ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿರುವ ಕೆಲವೇ ಶಿಕ್ಷಕರಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಒಬ್ಬರು ಎಂದು ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಪರಮಶಿವಮೂರ್ತಿ ತಿಳಿಸಿದರು.

ತುಮಕೂರು ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಪ್ರೊ.ಬರಗೂರು ಸ್ನೇಹ ಬಳಗ, ತುಮಕೂರು ಹಮ್ಮಿಕೊಂಡಿದ್ದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬರಗೂರು ತನ್ನ ವಿದ್ಯಾರ್ಥಿಗಳು ಓದು ಮುಗಿಸಿದ ನಂತರವೂ, ಅವರ ಕಷ್ಟ, ಸುಖಃಗಳಿಗೆ ಸ್ಪಂದಿಸಿ, ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಹತ್ತಾರು ಸಾವಿರ ವಿದ್ಯಾರ್ಥಿಗಳ ಹೃದಯದಲ್ಲಿರುವ ಪ್ರೀತಿಯ ಮೇಸ್ಟ್ರು ಆಗಿದ್ದಾರೆಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕಲ್ಬರ್ಗಿಯ ಸಹಾಯಕ ಪ್ರಾಧ್ಯಾಪಕ ಡಾ.ಅರುಣ ಜೋಳದ ಕೂಡ್ಲಗಿ, ಬರಗೂರು ಅವರ ಇದುವರೆಗಿನ ಬರಹ, ಮಾತು ಮತ್ತು ಸಿನಿಮಾಗಳನ್ನು ಗಮನಿಸಿದರೆ, ಎಲ್ಲದರಲ್ಲಿಯೂ ಪ್ರಜಾಪ್ರಭುತ್ವ ಮತ್ತು ಸಮಸಮಾಜ ತುಡಿತವನ್ನು ಕಾಣಬಹುದು. ಅಂಚಿನಿಂದ ಕೇಂದ್ರದವರೆಗಿನ ಪರಿಕಲ್ಪನೆ ಇದೆ. ಆದರೆ ಕಸಾಪ ಸಿದ್ದಮಾದರಿಯನ್ನು ಮುರಿದು ಬಂಡಾಯವೆನ್ನುವ ಹೊಸ ಮಾದರಿ ಹುಟ್ಟು ಹಾಕಿದ ಪರಿಣಾಮದಿಂದಾಗಿ, ಬರಗೂರರ ಬಂಡಾಯ ಸಾಹಿತ್ಯ ಹೆಚ್ಚು ಚರ್ಚೆಗೆ, ವಿಮರ್ಶೆಗೆ ಒಳಪಡಲಿಲ್ಲ ಎನಿಸುತ್ತಿದೆ. ಕಾಗೇಯ ಕಣ್ಣಿನಲ್ಲಿಯೂ ಕಾರುಣ್ಯವನ್ನು ಕಂಡುವರು ಬರಗೂರು, ಹಾಗಾಗಿ ಬರಗೂರರ ಸಮಗ್ರ ಸಾಹಿತ್ಯವನ್ನು ಮರುವಿಮರ್ಶೆಗೆ ಒಳಪಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಜಾತಿಯ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಜಾತ್ಯತೀತವಾಗಿ ಬರೆದಂತೆ, ಬದುಕುತಿದ್ದಾರೆ. ಹಾಗಾಗಿ ಬರಗೂರು ರಾಮಚಂದ್ರಪ್ಪ ನಮ್ಮ ನಡುವೆ ಇರುವ ಸಾರ್ವಜನಿಕ ಬುದ್ದಿಜೀವಿ ಎಂದು ತಿಳಿಸಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್,ಜಮ್ ಮಾತನಾಡಿ, ಪ್ರೊ. ಬರಗೂರು ರಾಮಚಂದ್ರಪ್ಪ ನನಗೆ ನೇರವಾಗಿ ಮೇಸ್ಟ್ರು ಅಲ್ಲದಿದ್ದರೂ ಬದುಕಿನ ಪಾಠ ಕಲಿಸಿದ ಗುರುಗಳು, ಅವರ ಸಂಘಟನೆ, ಹೋರಾಟದ ಬದುಕು ನನ್ನಂತಹ ಅನೇಕರಿಗೆ ಸ್ಪೂರ್ತಿ.ಮೇಸ್ಟ್ರು ತಮ್ಮ ಪತ್ನಿ ರಾಜೇಶ್ವರಿ ಅವರ ಬಗ್ಗೆ ಇರುವ ಗೌರವ ಭಾವನೆ, ಪುರಾಣದ ನಾಯಕರನ್ನು ಮೀರಿಸುವಂತಹದ್ದು ಎಂದರು.

ಕರ್ನಾಟಕ ಲೇಖಕಿಯರ ಬಳಗದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಪ್ರಭುತ್ವದೊಂದಿಗೆ ಗುರುತಿಸಿಕೊಂಡರೂ, ಅವರೊಂದಿಗೆ ಶಾಮೀಲಾಗದೆ ಸದಾ ಭಿನ್ನವಾಗಿಯೇ ಗುರುತಿಸಿಕೊಂಡಿರುವ ಅವರ ಅಕ್ಷರ ಅರಿವು ಇತರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೆ.ದೊರೆರಾಜು ಮಾತನಾಡಿ, ನಮ್ಮೊಡನೆ ಇರುವ ನಾಡಿನ ಸಾಕ್ಷಿ ಪ್ರಜ್ಞೆ ಬರಗೂರು ರಾಮಚಂದ್ರಪ್ಪ ಅವರಿಗೆ ತವರಿನ ಗೌರವ ಮಾಡಬೇಕೆಂಬುದು ನಮ್ಮಂತಹ ಅನೇಕರ ಬಹುದಿನದ ಕನಸು ಇಂದು ಈಡೇರಿದೆ. ಬರಗೂರರ ಸಮಾನತೆ ಮತ್ತು ಪ್ರಜಾಪ್ರಭುತ್ವ ಎರಡು ವಿಷಯಗಳಲ್ಲಿ ಇರುವ ಜೀವಪರ ಸೆಲೆ ದೊಡ್ಡದು. ಧರ್ಮ, ಜಾತಿಯ ಹೆಸರಿನಲ್ಲಿ ಕ್ರೌರ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂದಿನ ಕಾರ್ಯಕ್ರಮ ಪರ್ಯಾಯ ಆಲೋಚನಾ ದಾರಿಯೊಂದನ್ನು ತೋರಿಸಿದೆ. ಗಾಂಧಿ ಹುಟ್ಟಿದ ನಾಡು ಎನ್ನುತ್ತಲೇ ದೌರ್ಜನ್ಯ, ದಬ್ಬಾಳಿಕೆ ಮೀತಿ ಮೀರಿದ್ದು, ಬರಗೂರರ ಬರಹಗಳಲ್ಲಿನ ಮಾನವೀಯ ನೆಲೆಗಳು, ಇದರ ವಿರುದ್ದ ಹೋರಾಡಲು ಹೊಸದಿಕ್ಕು ತೋರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ರಂಗಮ್ಮ ಹೊದೆಕಲ್ಲು, ಗೋವಿಂದಯ್ಯ ಹೆಚ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular