ಭಾರತವು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆ ಆಗುತ್ತದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ವಾಸ್ತವ ಭಿನ್ನವಾಗಿದೆ. ಇದು ಹಸಿವಿನ ಗಣರಾಜ್ಯ, ಅತಿದೊಡ್ಡ ಸಂಖ್ಯೆ ಬಡವರು, ಅತಿಹೆಚ್ಚು ಜನ ಭೂಹೀನರು, ಅತಿಹೆಚ್ಚು ಹಸಿದವರು ಭಾರತದಲ್ಲಿ ಇದ್ದಾರೆ. ದೇಶದಲ್ಲಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳಾಗುತ್ತಿವೆ. ಸರಕಾರ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ವಿಜಯರಾಘವನ್ ಆರೋಪಿಸಿದರು.
‘ಸಮಗ್ರ, ಸಮೃದ್ಧ-ಕರ್ನಾಟಕ’ಕ್ಕಾಗಿ ತುಮಕೂರಿನಲ್ಲಿ ನಡೆಯುತ್ತಿರುವ ಸಿಪಿಎಂ ಕರ್ನಾಟಕ ರಾಜ್ಯ 24 ನೇ ಸಮ್ಮೇಳನದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ವೇದಿಕೆಯಲ್ಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮದು ಅಸಮಾನತೆಯಿಂದ ಕೂಡಿರುವ ಸಮಾಜ. ಎಲ್ಲ ಪಕ್ಷಗಳೂ ಜನರಿಗಾಗಿ ಇದ್ದೇವೆ ಎನ್ನುತ್ತಾರೆ. ಆದರೆ ಇವರು ಶ್ರೀಮಂತರ ಮತ್ತು ಬಂಡವಾಳಗಾರರ ಆಸ್ತಿ ಹೆಚ್ಚಳ ಮಾಡುವುದಕ್ಕಾಗಿ ಕೆಲಸ ಮಾಡುತ್ತಾರೆ. ಕಮ್ಯೂನಿಸ್ಟ್ ಪಕ್ಷ ಕಾರ್ಮಿಕರ ಪಕ್ಷ, ಕೃಷಿ ಕೂಲಿಕಾರರ ಪಕ್ಷ, ಶೋಷಿತ ದಲಿತರ ಪಕ್ಷ, ಹೋರಾಟ ನಿರತರ ಪಕ್ಷ. ಕೆಲವು ಪಕ್ಷಗಳು ಕೆಲವೇ ಕುಟುಂಬಗಳ ಹಿಡಿತದಲ್ಲಿರುತ್ತವೆ. ಧುರೀಣರು, ನಂತರ ಅವರ ಮಕ್ಕಳು, ಮೊಮ್ಮಕ್ಕಳು ಆ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಹೋಗುವ ಪಕ್ಷಗಳಾಗಿವೆ ಎಂದು ಟೀಕಿಸಿದರು.
ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ಮುಂದುವರಿದಿದೆ. ಯುವಜನರು ಆಧುನಿಕ ಗುಣಮಟ್ಟದ ಶಿಕ್ಷಣ ಬಯಸುತ್ತಿದ್ದಾರೆ. ಆದರೆ ಜನರಿಗೆ ಸರಕಾರಗಳು ವಂಚನೆ ಮಾಡುತ್ತಿವೆ. ಖಾಸಗಿ ವೈದ್ಯಕೀಯ, ಇಂಜಿನೀಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿವೆ, ಆದರೆ ದುಬಾರಿ ಶುಲ್ಕದಿಂದ ಜನಸಾಮಾನ್ಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆಪಾದಿಸಿದರು.
ಕೋಮುವಾದ, ಜಾತಿವಾದವನ್ನು ದುರ್ಬಳಕೆ ಮಾಡಲಾಗುತ್ತಿದೆ. ಈ ನೀತಿಗಳು ಬದಲಾಗಬೇಕು. ಶ್ರೀಮಂತರ ಪರವಾದ ನೀತಿಗಳಿಗೆ ಪರ್ಯಾಯ ನೀತಿಗಳು ಬರಬೇಕು. ಕಾರ್ಮಿಕರು, ಕೃಷಿಕೂಲಿಕಾರರು, ರೈತರು, ಶೋಷಿತರು ಸೇರಿ ಈ ಸಮಾಜದ ಸ್ವರೂಪವನ್ನು ಬದಲಿಸಬೇಕು. ಎಡಪಕ್ಷಗಳನ್ನು ಬಲಪಡಿಸಬೇಕು ಎಂದು ಹೇಳಿದರು.
ಜನಪರ ಚಿಂತಕ ದೊರೈರಾಜ್ ಮಾತನಾಡಿ, ತಾತ್ವಿಕ ನೆಲೆಗಟ್ಟಿರುವ ರಾಜಕೀಯ ಹೋರಾಟ ಮುಖ್ಯ. ಅಧಿಕಾರ ರಾಜಕಾರಣಕ್ಕಾಗಿ ಆರೆಸ್ಸೆಸ್‌ನಂತಹ ಸಂಘಟನೆ ಜಾತಿ-ಜಾತಿ, ಸಮುದಾಯ-ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿದೆ. ಅದು ವಿನಾಶದ ಸಿದ್ದಾಂತ. ಆರೆಸೆಸ್ ಬಿಜೆಪಿ ಅಧಿಕಾರ ರಾಜಕಾರಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿವೆ. ಇಂತಹ ಶಕ್ತಿಗಳಿಗೆ ಅಧಿಕಾರ ಸಿಗದಂತೆ ಜನತೆ ಎಚ್ಚರ ವಹಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಎಂ.ಎ.ಬೇಬಿ, ಸಿ.ಪಿ.ಐ.ಎಂ ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯೆ ಕೆ. ನೀಲಾ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿದರು. ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಪಾಲಿಟ್ ಬ್ಯೂರ್ ಸದಸ್ಯ ಬಿ.ವಿ. ರಾಘವಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್, ಚಿಂತಕ ಸಿ.ಯತಿರಾಜು, ಲೇಖಕಿ ಬಾ.ಹ. ರಮಾಕುಮಾರಿ ಇದ್ದರು.