ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ತುಮಕೂರಿನ ಜ್ಞಾನ ಸಿಂಧು ಸ್ವಾಮಿ ಅವರನ್ನು ಆಯ್ಕೆ ಮಾಡಿ ಕೆಆರ್ ಎಸ್ ಪಕ್ಷದ ಕಾರ್ಯಕಾರಿ ಸಮಿತಿ ಆದೇಶ ಹೊರಡಿಸಿದೆ.
ಈ ಸಂಬಂಧ ತುಮಕೂರಿನಲ್ಲಿ ಮಾತನಾಡಿದ ಜ್ಞಾನಸಿಂಧು ಸ್ವಾಮಿ ಅವರು, ಪಕ್ಷಕ್ಕೆ ದುಡಿದ ಪ್ರಾಮಾಣಿಕತೆಯನ್ನು ಗಮನಿಸಿ ಉಪಾಧ್ಯಕ್ಷ ಸ್ಥಾನಕ್ಕೇರಿಸಿ ಆಯ್ಕೆ ಮಾಡಿದೆ. ಪಕ್ಷದಲ್ಲಿ ನನ್ನ ಜವಾಬ್ದಾರಿಯನ್ಮು ಇನ್ನೂ ಹೆಚ್ಚು ಮಾಡಿದೆ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತವಾಗಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತೇನೆ. ಈಗಾಗಲೇ ಪಕ್ಷದಿಂದ ಜಿಲ್ಲಾಮಟ್ಟ ಹಾಗೂ ಸ್ಥಳೀಯ ಮಟ್ಟದಲ್ಲೂ ಹಲವು ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಅದನ್ನು ಇನ್ನಷ್ಟು ವಿಸ್ತರಿಸಿ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಡುವ ಕೆಲಸ ಮಾಡುತ್ತೇವೆ ಎಂದರು.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕ್ಷೀಣಿಸುತ್ತಿದೆ. ಇದಕ್ಕೆ ಇಲಾಖೆಯಲ್ಲಿ ಬದ್ಧತೆ ಇಲ್ಲದಿರುವ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳು ಮತ್ತು ಸಚಿವರೇ ನೇರ ಕಾರಣ. ಈ ವರ್ಷದಲ್ಲಿ ಬಿಡುಗಡೆಗೊಂಡ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗಿದೆ ಎಂಬ ವರದಿ ಬಹಿರಂಗಗೊಂಡಿದೆ. ಬೇರೆ ಬೇರೆ ದೇಶಗಳಲ್ಲಿ ಅರಣ್ಯವನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದು, ನಮ್ಮಲ್ಲಿ ಸರಿಯಾಗಿ ಅರಣ್ಯ ಸಂರಕ್ಷಿಸುವ ಮತ್ತು ಅದನ್ನು ಹೆಚ್ಚಿಸುವ ಕಾರ್ಯಗಳನ್ನು ಮಾಡುತ್ತಿಲ್ಲ. ಇದರಲ್ಲಿ ಭ್ರಷ್ಟ ಅಧಿಕಾರಿಗಳ ಪಾಲೂ ಹೆಚ್ಚಿದೆ ಎಂದು ಆರೋಪಿಸಿದರು.
ಹವಾಮಾನ ಬದಲಾವಣೆ ಮತ್ತು ಭೂ ತಾಪಮಾನ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇರುವ ಭ್ರಷ್ಟ ಪಕ್ಷಗಳು ಕಾರ್ಯನಿರ್ವಹಣೆ ಮಾಡುತ್ತಿಲ್ಲ, ಆದ್ದರಿಂದ ರೈತರು , ಕೂಲಿ ಕಾರ್ಮಿಕರು , ಮಹಿಳೆಯರು ತೊಂದರೆ ಸಿಲುಕುತ್ತಿದ್ದು ಎಲ್ಲರು ಸುಸ್ಥಿರವಾಗಿ ಬದುಕುವ ಸುಸ್ಥಿರ ಸಮಾಜ ಮತ್ತು ಸುಸ್ಥಿರ ಪರಿಸರವನ್ನು ಕಟ್ಟುತ್ತೇವೆ ಎಂದರು.
ರಾಜ್ಯ ಸರ್ಕಾರ ನಿರುದ್ಯೋಗಿ ಯುವಜನರನ್ನು ಕಡೆಗಣಿಸಿದೆ. 3 ಲಕ್ಷ ಸರ್ಕಾರಿ ನೌಕರಿಗಳು ಖಾಲಿ ಇದ್ದರೂ ಕೂಡ ಅವುಗಳನ್ನು ತುಂಬುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಲಂಚಾವತಾರ ಮಿತಿ ಮೀರಿದ್ದು, ತಪ್ಪಿತಸ್ತರಿಗೆ ಶಿಕ್ಷೆಯಾಗುತ್ತಿಲ್ಲ. ಈ ಬಗ್ಗೆ ಹಲವು ಸಾಕ್ಷಿಗಳೇ ಇದ್ದರೂ ಸಹ ಉನ್ನತ ಹಂತದ ತನಿಖಾ ಸಂಸ್ಥೆಗಳೂ ಸಹ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುವಲ್ಲಿ ವಿಲಗೊಂಡಿವೆ. ತನಿಖಾ ಸಂಸ್ಥೆಗಳ ತಮ್ಮ ಕರ್ತವ್ಯ ಮರೆತಿದ್ದು, ಅವು ಕೂಡ ಭ್ರಷ್ಟ ರಾಜಕೀಯ ಪ್ರೇರಿತ ಸಂಸ್ಥೆಗಳಾಗಿ ಮಾರ್ಪಾಡಾಗುತ್ತಿರುವುದು ದೇಶದ ಈ ನಾಡಿನ ದುರಂತ ಎಂದರು.
ರಾಜ್ಯದ ಅದೆಷ್ಟೋ ಗ್ರಾಮಗಳು ಇಂದಿಗೂ ಕಗ್ಗತ್ತಲಲ್ಲೇ ಕಳೆಯುವ, ರಸ್ತೆಯನ್ನೇ ಕಾಣದ, ಕುಡಿಯಲು ಶುದ್ಧ ನೀರು ಸಿಗದ ಗ್ರಾಮಗಳು ಸಾವಿರಾರು ಸಿಗುತ್ತವೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇನ್ನೇಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.


