Sunday, December 22, 2024
Google search engine
Homeಮುಖಪುಟಒಳ ಮೀಸಲಾತಿ ಜಾರಿಗೆ ಸರ್ಕಾರ ತಯಾರಿಯಾಗಿದೆ ಎಂದ ಮಾಜಿ ಸಚಿವ ಎಚ್.ಆಂಜನೇಯಲು

ಒಳ ಮೀಸಲಾತಿ ಜಾರಿಗೆ ಸರ್ಕಾರ ತಯಾರಿಯಾಗಿದೆ ಎಂದ ಮಾಜಿ ಸಚಿವ ಎಚ್.ಆಂಜನೇಯಲು

ಪರಿಶಿಷ್ಟ ಜಾತಿಯಲ್ಲಿ ಪ್ರಮುಖ ನಾಲ್ಕು ಜಾತಿಗಳಿದ್ದು ಭೋವಿ, ಲಂಬಾಣಿ, ಕೊರಚ, ಮಾದಿಗ ಸಮುದಾಯಗಳಿವೆ ಇದರಲ್ಲಿ ಉಪಜಾತಿಗಳು ಸೇರಿ 101 ಜಾತಿಗಳಿವೆ. ಇವುಗಳಲ್ಲಿ ಅನೇಕ ಜಾತಿಗಳಿಗೆ ಮೀಸಲಾತಿ ಸರಿಯಾಗಿ ದೊರೆಯುತ್ತಿಲ್ಲ ಎಂದು, ಕಳೆದ 30 ವರ್ಷಗಳಿಂದ ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಆರನೇ ಗ್ಯಾರಂಟಿಯಾದ ಒಳಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ತಯಾರಾಗಿದೆ. ಇದಕ್ಕೆ ಇಂಬು ನೀಡುವಂತೆ ಸುಪ್ರೀಂ ಕೋರ್ಟ್ ಸಹ ಒಳಮೀಸಲಾತಿಯನ್ನು ಹಂಚಿಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎನ್ನುವ ತೀರ್ಪನ್ನು ಎತ್ತಿಹಿಡಿದು ನಮ್ಮ ಸಮುದಾಯಗಳ ದನಿಗೆ ಶಕ್ತಿ ನೀಡಿದೆ. ನಮ್ಮ ಸರ್ಕಾರವೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಒಳಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದರು. 

ಎಂಪೆರಿಕಲ್ ಡಾಟ ಅಂದರೆ ಜನಸಂಖ್ಯೆ ಹಾಗೂ ಹಿಂದುಳಿದಿರುವ ಸ್ಥಾನಮಾನಗಳ ಅಂಕಿ- ಅಂಶಗಳನ್ನು ಇಟ್ಟುಕೊಂಡು ಹಂಚಿಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ. ಅದರಂತೆ ನಮ್ಮ ಸರ್ಕಾರ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿ ವರದಿ ನೀಡಿ ಎಂದು ಹೇಳಲಾಗಿದೆ. ಅವರೂ ಸಹ ಕಾರ್ಯಮುಖರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈಗ ಸರ್ಕಾರ ನಮ್ಮ ಪರವಾಗಿದೆ. ಹೀಗಿರುವಾಗ ಹೋರಾಟ ಅನಗತ್ಯ. 30 ವರ್ಷ ಕಾದಿರುವ ನಾವುಗಳು ಎರಡು ತಿಂಗಳು ಕಾಯೋಣ.

ಬಿಜೆಪಿಯವರು ಅವರ ಅಧಿಕಾರದ ಸಮಯದಲ್ಲಿ ಮಾಡಿದ ಸಮಿತಿಯ ವರದಿಯನ್ನು ಜಾರಿಗೆ ತರಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಆ ಪಕ್ಷಕ್ಕೆ ನಾವು ಬುದ್ದಿ ಹೇಳಲು ಆಗುವುದಿಲ್ಲ. ನಾವುಗಳು ನಾಗಮೋಹನ್ ದಾಸ್ ಅವರಿಗೆ ಸೂಕ್ತ ದಾಖಲೆಗಳನ್ನು ನೀಡುವ ಕೆಲಸ ಮಾಡಬೇಕು ಎಂದರು. 

ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಈ ಒಳಮೀಸಲಾತಿ ಜಾರಿ ಮಾಡಲು ಎಂಪಿರಿಕಲ್ ಡೇಟಾ ಲಭ್ಯವಿಲ್ಲ ಎಂದು ಒಂದಷ್ಟು ಜನ ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಸರ್ಕಾರದ ಬಳಿ ಈ ದತ್ತಾಂಶವಿದೆ. 2011 ರ ಜನಗಣತಿಯ ಅಂಶಗಳನ್ನು ಪರಿಗಣನೆ ಮಾಡಬೇಕು ಎಂದು ಹೇಳಲಾಗಿದೆ. ಜೊತೆಗೆ ಸದಾಶಿವ ಆಯೋಗ ಕಲೆಹಾಕಿರುವ ಮಾಹಿತಿಗಳನ್ನೂ ಸಹ ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ ಎಂದು ತಿಳಿಸಿದರು.

ನಾಗಮೋಹನ್ ದಾಸ್ ಅವರ ಆಯೋಗವೇ ಬೇಡ ಎಂದು ಅನೇಕರು ವಾದ ಮಾಡುತ್ತಿದ್ದಾರೆ. ಪರಿಶಿಷ್ಟರಲ್ಲಿ ಜಾತಿವಾರು ಜನಗಣತಿ ಪೂರ್ಣ ಪ್ರಮಾಣದಲ್ಲಿಲ್ಲ. ಆದಿ ಕರ್ನಾಟಕ ಎಂದು ಮಾದಿಗರು ಹಾಗೂ ಛಲವಾದಿಗಳು ಇಬ್ಬರೂ ಬರೆಸಿದ್ದಾರೆ. ಆದಿ ದ್ರಾವಿಡ ಎಂದು ಎರಡು ಸಮುದಾಯವರು ಬರೆಸಿದ್ದಾರೆ. ಆದ ಕಾರಣ ಜಿಲ್ಲವಾರು ವಿವೇಚನೆಯನ್ನು ಬಳಸಿ ಯಾವ ಜಿಲ್ಲೆಯವರು ಯಾವ ಸಮುದಾಯಕ್ಕೆ ಸೇರುತ್ತಾರೆ ಎನ್ನುವುದನ್ನು ನಾಗಮೋಹನ್ ದಾಸ್ ಸಮಿತಿ ತೀರ್ಮಾನ ಮಾಡಬೇಕು ಎಂದು ಸರ್ಕಾರ ತನ್ನ ನಿಯಮದಲ್ಲಿ ಅವರಿಗೆ ತಿಳಿಸಿದೆ ಎಂದರು.

ಸಮಾನ ಉದ್ಯೋಗಗಳನ್ನು ಮಾಡುವ ಮಾದಿಗರು, ಸಮಗಾರರು, ಡೋಹರರು, ಮಚ್ಚಗಾರರರು ಈ ರೀತಿಯ ಸಮುದಾಯಗಳನ್ನು ಒಂದು ಗುಂಪು ಮಾಡಲು ನಾಗಮೋಹನ್ ದಾಸ್ ಅವರ ಸಮಿತಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಸರ್ಕಾರದ ಅಪೇಕ್ಷೆ. ಈ ಸಮಿತಿ ಮಾಡದೇ ಸಂಪುಟ ಉಪ ಸಮಿತಿ ಮಾಡಿದ್ದರೆ ರಾಜಕೀಯ ಪ್ರೇರಿತ ಎನ್ನುವ ಆಪಾದನೆ ಬರುತ್ತಿತ್ತು. ಆದ ಕಾರಣಕ್ಕೆ ಈ ಆಯೋಗ ಅತ್ಯಂತ ಅವಶ್ಯಕವಾದುದು ಎಂದು ಹೇಳಿದರು.

ಛಲವಾದಿ ಹಾಗೂ ಸಂಬಂಧಿತ ಗುಂಪುಗಳು, ಮಾದಿಗರು ಹಾಗೂ ಅದಕ್ಕೆ ಸಂಬಂಧಿತ ಗುಂಪುಗಳನ್ನು ಸೇರಿಸಿ ವರ್ಗ ಮಾಡಬೇಕು ಎಂದು ಸರ್ಕಾರವೇ ತಿಳಿಸಿದೆ. ಅಲ್ಲದೇ ಅಂತರ್ ಹಿಂದುಳಿದಿರುವಿಕೆ ಸೇರಿದಂತೆ ಇತರೇ ದತ್ತಾಂಶಗಳನ್ನು ಲಭ್ಯವಿದ್ದಲ್ಲಿ ಆಯೋಗ ಸಂಗ್ರಹಿಸಬಹುದು ಎಂದು ತಿಳಿಸಲಾಗಿದೆ ಎಂದು ತಿಳಿಸಿದರು. 

ಮಾಜಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಸಂಯೋಜಕ ಸತೀಶ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular