ತುಮಕೂರು ಜಿಲ್ಲೆಗೆ ಮರಣ ಶಾಸನವಾಗಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ಜಿಲ್ಲೆಯ ಶಾಸಕರು ಪಕ್ಷಭೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ಇದರ ವಿರುದ್ದ ದ್ವನಿ ಎತ್ತಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಹೋರಾಟ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ತುಮಕೂರು ನಗರದ ಸ್ವಾತಂತ್ರ ಚೌಕದಿಂದ ಡಿಸಿ ಕಚೇರಿವರೆಗೆ ತೋಳಿಗೆ ಕಪ್ಪುಪಟ್ಟಿ ಧರಿಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಸರಕಾರ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಿಂದ ಹಿಂದೆ ಸರಿಯದಿದ್ದರೆ, ಮುಂಬರುವ ಜಿ.ಪಂ., ತಾ.ಪಂ., ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರೈತರು ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಕಳೆದ ಎಂಟು ತಿಂಗಳಿನಿಂದ ವಿವಿಧ ಹಂತದ ಹೋರಾಟಗಳು ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಡೆಯುತ್ತಿವೆ. ಅಂದಿನಿಂದಲೂ ಜಿಲ್ಲಾಡಳಿತ ರೈತರು, ಸಾರ್ವಜನಿಕರೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರೂ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಇಂದು ತಾಂತ್ರಿಕ ಸಮಿತಿ ವರದಿ ಕುರಿತು ಪತ್ರಿಕಾಗೋಷ್ಟಿಯನ್ನು ಬೆಂಗಳೂರಿನಲ್ಲಿ ಏರ್ಪಡಿಸಿದ್ದಾರೆ. ಜಿಲ್ಲೆಯ ಸಮಸ್ಯೆಯೇ ಗೊತ್ತಿರದ ಪತ್ರಕರ್ತರು ಯಾವ ಪ್ರಶ್ನೆ ಕೇಳಲು ಸಾಧ್ಯ. ಈ ರೀತಿಯ ಬೇಕಾಬಿಟ್ಟಿ ವರ್ತನೆ ಸರಿಯಲ್ಲ. ಸರಕಾರ ಕೂಡಲೇ ಯೋಜನೆಯನ್ನು ಕೈಬಿಡಬೇಕು. ಹಾಗೆಯೇ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು ಪಕ್ಷಬೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ದನಿಎತ್ತಿ ಜಿಲ್ಲೆಯ ಹಿತ ಕಾಯಬೇಕೆಂದು ಆಗ್ರಹಿಸಿದರು.
ಸಂಯುಕ್ತ ಕಿಸಾನ್ ಹೋರಾಟದ ಸಂಚಾಲಕ ಸಿ.ಯತಿರಾಜು ಮಾತನಾಡಿ, ಜನರಿಗೆ ನೀರು ಪ್ರಾಥಮಿಕ ಅದ್ಯತೆ. ಕುಡಿಯಲು ಮತ್ತು ಕೃಷಿಗೆ ನೀರು ಅತಿ ಅವಶ್ಯ. ಆದರೆ ಆಳುವ ಸರಕಾರಗಳ ಇಚ್ಚಾಶಕ್ತಿಯ ಕೊರತೆಯಿಂದ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಸರಕಾರ ಇದನ್ನು ಖಾತ್ರಿಪಡಿಸಿಲ್ಲ. ಚುನಾವಣಾ ಗಿಮಿಕ್‌ಗಳಾಗಿ ನೀರಾವರಿ ಯೋಜನೆಗಳು ಬಳಕೆಯಾಗುತ್ತಿವೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆ, ಜಿಲ್ಲೆಗಳ ನಡುವೆ ಜಗಳಕ್ಕೆ ಕಾರಣವಾಗಿದೆ.ಹೇಮಾವತಿ ನಾಲೆಯಿಂದ ಜಿಲ್ಲೆಗೆ ನಿಗದಿಪಡಿಸಿರುವ ಪ್ರಮಾಣದ ಸಂಪೂರ್ಣ ನೀರು, ಯೋಜನೆ ಪ್ರಾರಂಭವಾಗಿ 40 ವರ್ಷ ಕಳೆದರೂ ಒಮ್ಮೆಯೂ ಹರಿದಿಲ್ಲ. ಹೀಗಿರುವಾಗ, ಮೂಲ ನಾಲೆಯ ಅರ್ಧ ಭಾಗದಿಂದ ನೀರು ತೆಗೆದುಕೊಂಡು ಹೋಗುವ ಮೂಲಕ ಇಡೀ ಜಿಲ್ಲೆಗೆ ಅನ್ಯಾಯ ಎಸಗಲಾಗುತ್ತಿದೆ. ಇದರ ವಿರುದ್ದ ರೈತರು, ಸಾರ್ವಜನಿಕರು ದ್ವನಿ ಎತ್ತಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಸ್.ಎನ್.ಸ್ವಾಮಿ, ಜಿ.ಶಂಕರಪ್ಪ, ಗಿರೀಶ್, ಕಂಬೇಗೌಡ, ರೈತ ಸಂಘದ ಚಿಕ್ಕಬೋರೇಗೌಡ, ಗುಬ್ಬಿಯ ಲೋಕೇಶ್, ಕೊರಟಗೆರೆಯ ಶಬ್ಬೀರ್, ಮಹಿಳಾ ಘಟಕದ ನಾಗರತ್ನಮ್ಮ, ಭಾಗ್ಯಮ್ಮ, ಅಜ್ಜಪ್ಪ ಇದ್ದರು.