ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳನ್ನು ಕರ್ನಾಟಕದ ಮನೆಮನೆಗೂ ತಲುಪಿಸುವಂತಹ ಕೆಲಸವನ್ನು ಮಾಡಿದವರು ಪ್ರೊ.ಬಿ.ಕೃಷ್ಣಪ್ಪ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿರುವ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಪಾವನ ಆಸ್ಪತ್ರೆ ಮತ್ತು ಬಹುಜನ ನಾಯಕ ಡಿ.ರಂಗಸ್ವಾಮಿ ಬೆಲ್ಲದಮಡು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಚಳವಳಿಯ ಪ್ರಮುಖ ಸಂಘಟಕರಾಗಿದ್ದ ರಂಗಸ್ವಾಮಿ ಬೆಲ್ಲದಮಡು ಅವರ ಕುರಿತು ಎಚ್.ವಿ.ವೆಂಕಟಾಚಲ ಸಂಪಾದಿಸಿರುವ ‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕದ ದಲಿತ ಚಳವಳಿ ಇಂಡಿಯಾ ದೇಶಕ್ಕೆ ಮಾದರಿಯಾದುದು. ಬಹಳ ಮಂದಿ ಕಾರ್ಯಕರ್ತರು, ಹೋರಾಟಗಾರರು ಚಳವಳಿಗಾಗಿ ಸುಮ್ಮನೆ ದುಡಿದರು. ಕಾರ್ಯಕರ್ತರು ಇರುವುದರಿಂದಲೇ ದಲಿತ ಚಳವಳಿ. ಯಾವುದೇ ಒಬ್ಬ ನಾಯಕನಿಂದಲ್ಲ. ಕೃಷ್ಣಪ್ಪ ಅವರ ಅನುಯಾಯಿಗಳು ಪ್ರತಿಯೊಂದು ಹಳ್ಳಿಯಲ್ಲಿದ್ದಾರೆ. ಅವರು ಕ್ರಿಯಾಶೀಲರಾಗಬೇಕು. ವಿಘಟನೆಯಾಗಿರುವ ಚಳವಳಿಯನ್ನು ಮತ್ತೆ ಮುನ್ನೆಲೆಗೆ ತರಬೇಕು ಎಂದು ಸಲಹೆ ನೀಡಿದರು.
ದಲಿತ ಚಳವಳಿಗಾರರು, ಕಾರ್ಯಕರ್ತರು ಸಮಕಾಲೀನ ಸವಾಲುಗಳು ಏನು? ಮುಂದೆ ನಾವು, ನೀವು ಬದುಕಬೇಕಾದರೆ ಈ ಸಮಾಜ ಅಸ್ತಿತ್ವದಲ್ಲಿರಬೇಕಾದರೆ, ಮನುಷ್ಯ ಸಂಬಂಧಗಳು ಇರಬೇಕೆಂದರೆ ನಾವು ಸಮಕಾಲೀನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಮೀರಿ ಬೆಳೆಯುವಂತಹ ಹೋರಾಟವನ್ನು ಕಟ್ಟಬೇಕಾಗಿದೆ ಎಂದರು.
ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತು ಇದೇ ಸಿದ್ದಾಂತವನ್ನು ಹೊಂದಿರುವ ರಾಜಕೀಯ ಪಕ್ಷ ಅಧಿಕಾರದಲ್ಲಿರುವುದರಿಂದ ಬಹಳ ಅಪಾಯಗಳಿವೆ. ನಮ್ಮ ನಡುವೆ ರಾಜಕೀಯ ತೀರ್ಮಾನಗಳನ್ನು ಮಾಡುವಾಗ ನಮ್ಮ ವೈಯಕ್ತಿಕತೆಯ ಲಾಲಸೆಗಳನ್ನು ತೀರಿಸಿಕೊಳ್ಳುವುದಕ್ಕೆ ಯೋಚನೆ ಮಾಡದೆ, ಒಂದು ಸಂಸ್ಥೆ ಮತ್ತು ಸಮಾಜದ ಬಗ್ಗೆ ಯೋಚನೆ ಮಾಡಬೇಕು ಎಂದು ತಿಳಿಸಿದರು.
ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದ ದಲಿತ ಚಳವಳಿ ಮುಖಂಡರು ದಿನಬೆಳಗಾದರೆ ನಾವು ಅಧಿಕಾರಿಗಳ ಮುಂದೆ ಕೈಚಾಚಿ ಕೂಗಿ ಕೇಳುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಸಂವಿಧಾನಬದ್ದವಾಗಿರುವ ಆಡಳಿತ ವ್ಯವಸ್ಥೆಯೇ ಕಾರಣ. ಈ ಆಡಳಿತ ವ್ಯವಸ್ಥೆ ಸನಾತನ ಧರ್ಮದವನ್ನು ಜನರ ಮೇಲೆ ಹೇರುವಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅಸ್ಪೃಶ್ಯತೆ ಆಚರಿಸಬಾರದು ಎಂಬ ಬಗ್ಗೆ ಕಠಿಣ ಕಾನೂನುಗಳಿದ್ದರೂ ಆಳುವ ಸರ್ಕಾರಗಳು ದೌರ್ಜನ್ಯ ಮಾಡುವವರಿಗೆ, ಜಾತೀಯತೆಯನ್ನು ಆಚರಣೆ ಮಾಡುವವರಿಗೆ, ಮೌಢ್ಯವನ್ನು ತುಂಬಿ ಶೋಷಣೆ ಮಾಡುವವರಿಗೆ ಮುಕ್ತ ಅವಕಾಶವನ್ನು ಕೊಟ್ಟಿರುವ ವಾತಾವರಣ ಕಾಣುತ್ತಿದ್ದೇವೆ. ಇದರ ವಿರುದ್ಧ ಹೋರಾಟ ಮಾಡುವ ದಲಿತರು, ಮಹಿಳೆಯರು ಮತ್ತು ಕಾರ್ಮಿಕರ ವಿರುದ್ಧವೇ ಕಾನೂನುಗಳು ಬರುತ್ತಿವೆ. ಈ ಎಲ್ಲ ಅಪಾಯಗಳು ಜಾತಿ ವ್ಯವಸ್ಥೆ, ಬ್ರಾಹ್ಮಣಶಾಹಿ ಸಿದ್ದಾಂತದಿಂದ ಮತ್ತು ಬಂಡವಾಳಶಾಹಿ ಸುಲಿಗೆಯ ಆರ್ಥಿಕ ನೀತಿಯಿಂದ ಆಗಿವೆ. ಇದರ ವಿರುದ್ಧ ಹೋರಾಟ ಮಾಡಲು ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪ್ರೊ.ಕಾಳೇಗೌಡ ನಾಗವಾರ, ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ, ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಹಿರಿಯ ದಲಿತ ಹೋರಾಟಗಾರ ಎನ್.ವೆಂಕಟೇಶ್, ಹೋರಾಟಗಾರ್ತಿ ಗಂಗಮ್ಮ ಎನ್.ಕೆಂಪಯ್ಯ, ಪಾವನ ಆಸ್ಪತ್ರೆಯ ಡಾ.ಮುರುಳೀಧರ್, ಬೆಲ್ಲದಮಡು ಕೃಷ್ಣಪ್ಪ, ಪತ್ರಕರ್ತ ಹೆಚ್.ವಿ.ವೆಂಕಟಾಚಲ ಹಾಜರಿದ್ದರು. ಕೆ.ಪಾವನ ಸ್ವಾಗತಿಸಿ, ಡಾ. ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.