ತುಮಕೂರು ತಾಲ್ಲೂಕಿನ ಸೋರೆಕುಂಟೆಯಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಡಿ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿಗಳು ಕ್ರಿಕೆಟ್ ಆಡುವ ಮೂಲಕ ಜನರ ಗಮನ ಸೆಳೆದರು.
ಖರಾಬ್ ಭೂಮಿ ಸೇರಿದಂತೆ 52 ಎಕರೆ ಭೂ ಪ್ರದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ಭೂಮಿಯನ್ನು ಕೆಎಸ್.ಸಿ.ಎ ವ್ಯವಸ್ಥಾಪಕರಿಗೆ ಸಿಎಂ ಹಸ್ತಾಂತರ ಮಾಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿ ಹಾಸೀನರಾಗಿದ್ದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರನ್ನು ಉದ್ದೇಶಿಸಿ ‘ನೋಡಪ್ಪ ಸುರೇಶ್ ಗೌಡ ಅಭಿವೃದ್ಧಿ ಆಗ್ತಾ ಇದೆ’ ಎಂದು ಕಿಚಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಗೌಡ ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಅದಕ್ಕೆ ಮಾತನಾಡುತ್ತಲೇ ಪ್ರತಿಕ್ರಿಯಿಸಿ ಸಿಎಂ ಅಲ್ಲೂ ಉತ್ತರ ಕೊಡುವ ಶಕ್ತಿ ಇದೆ ಎಂದರು.
‘ನಾನು 41 ವರ್ಷದಿಂದ ರಾಜಕೀಯದಲ್ಲಿ ಇದ್ದೀನಿ ಕಣಯ್ಯ. ನಾನು ತಪ್ಪು ಮಾಡಿಲ್ಲ. ಮಾಡೋದು ಇಲ್ಲ. ಹಾಗಾಗಿ ಹೆದರುವುದೂ ಇಲ್ಲ ಎಂದು ಸಿದ್ದರಾಮಯ್ಯ ಸುರೇಶ್ ಗೌಡರಿಗೆ ಟಾಂಗ್ ನೀಡಿದರು.
ವೇಧಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್ ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ನಗರ ಶಾಸಕ ಜ್ಯೋತಿಗಣೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.
ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಶಾಸಕ ಬಿ.ಸುರೇಶ್ ಗೌಡ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಪ್ಪು ಬಾವುಟ ಪ್ರದರ್ಶನ ಇಲ್ಲ. ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಉಲ್ಟಾ ಹೊಡೆದರು. ಈ ಹಿನ್ನೆಲೆಯಲ್ಲಿ ಸುರೇಶ್ ಗೌಡಗೆ ಟಾಂಗ್ ನೀಡಿದರು ಸಿದ್ದರಾಮಯ್ಯ