ಒಳಮೀಸಲಾತಿ ಜಾರಿ ಸಂಬಂಧ ಮಾಹಿತಿ ಸಂಗ್ರಹಿಸಲು ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ನೇಮಕವಾಗಿ ಒಂದು ತಿಂಗಳು ಕಳೆದರೂ ಕಾರ್ಯಸೂಚಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದರ ವಿರುದ್ದ ಸಮಸ್ತ ಮಾದಿಗ ಸಮಾಜ ಡಿಸೆಂಬರ್ 2ರ ಮುಖ್ಯಮಂತ್ರಿ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿರ್ಲಿಪ್ತರಾಗಿದ್ದಾರೆ, ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂಬ ಆಶ್ವಾಸನೆ ನೀಡಿ, ಒಳಗೊಳಗೆ 34 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನಮ್ಮ ವಿರೋಧದ ನಂತರ ನ.25ರಂದು, ಸುತ್ತೊಲೆ ಹೊರಡಿಸಿ, ಯಾವುದೇ ಅಧಿಸೂಚನೆ ಮಾಡದಂತೆ ಸೂಚನೆ ನೀಡಲಾಗಿದೆ. ಸರಕಾರ ನುಡಿದಂತೆ ನಡೆಯುತ್ತಿಲ್ಲ. ಮಾದಿಗರನ್ನು ಅವಕಾಶದಿಂದ ವಂಚಿಸುವ ಕೆಲಸ ನಡೆಯುತ್ತಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಮಾಡುವುದಿಲ್ಲ ಎಂದು ಸ್ಥಗಿತ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ನೇಮಕಾತಿ ನಡೆಯುತ್ತಿದೆ ಎಂದು ದೂರಿದರು.
ನಿವೃತ್ತಿ ಐಎಎಸ್ ಅಧಿಕಾರಿ ಅನಿಲ್‌ಕುಮಾರ ಮಾತನಾಡಿ, ಸರಕಾರ ಉದ್ದೇಶಪೂರ್ವಕವಾಗಿಯೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮುಖಂಡ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಮಾದಿಗ ಸಮುದಾಯದ ಮುಂದಿರುವ ಏಕೈಕ ಪ್ರಶ್ನೆ ಎಂದರೆ ಒಳ ಮೀಸಲಾತಿ ಜಾರಿ. ಹಾಗಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ಮಾದಿಗ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಅವರನ್ನು ಸಹ ಡಿಸೆಂಬರ್ 2ರ ಪ್ರತಿಭಟನೆಗೆ ಅಹ್ವಾನ ನೀಡುತ್ತೇವೆ. ಇದೊಂದು ಪಕ್ಷಾತೀತ, ಸಮುದಾಯದ ಹಿತ ಕಾಯುವ ಹೋರಾಟವಾಗಲಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗೃಹ ಇಲಾಖೆ ನೇಮಕಾತಿಯಲ್ಲಿ ವಿನಾಯಿತಿ ನೀಡುವಂತೆ ಕೇಳಿದ್ದಾರೆ. ಇದು ತರವಲ್ಲ. ಮಾದಿಗ ಸಮುದಾಯ ಮಧುಗಿರಿ ಮತ್ತು ಕೊರಟಗೆರೆ ಎರಡು ಕ್ಷೇತ್ರಗಳಲ್ಲಿ ಅವರ ಹಿತ ಕಾಯ್ದಿದೆ. ಈ ಸಂದರ್ಭದಲ್ಲಿ ಸಮುದಾಯಕ್ಕೆ ಅನ್ಯಾಯ ಮಾಡುವುದು ಒಳ್ಳೆಯದಲ್ಲ. ಹಾಗಾಗಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಯನ್ನು ತಡೆಹಿಡಿಯಲು ಅವರು ಸಹ ಸರಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಬೆಳಗುಂಬ ವೆಂಕಟೇಶ್, ಸೊರೆಕುಂಟೆ ಯೋಗೀಶ್, ರಘು, ಅಂಜಿನಪ್ಪ ಮತ್ತಿತರರು ಇದ್ದರು.