ಜನಪ್ರತಿನಿಧಿಗಳು ಜಾತಿ ನಾಯಕರಾಗುವುದರಿಂದ ಜನನಾಯಕರಾಗಲು ಸಾಧ್ಯವಿಲ್ಲ. ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದಾಗ ಮಾತ್ರ ಹೆಚ್ಚು ದಿನ ರಾಜಕೀಯ ಅಧಿಕಾರ ಅನುಭವಿಸಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಎಂಪ್ರೆಸ್ ಕೆಪಿಎಸ್ ಶಾಲೆ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಆಯೋಜಿಸಿದ್ದ 2023-24 ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಅಧಿಕಾರವೆಂಬುದು ಅತಿ ಮುಖ್ಯ ಅಂಗವಾಗಿದೆ. ಅಧಿಕಾರ ದೊರೆತ ಸಂದರ್ಭದಲ್ಲಿ ದ್ವನಿ ಇಲ್ಲದ ಸಮುದಾಯಗಳ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಸಮಾಜದ ಹಿತ ಬಯಸುವವರು, ಸಮಾಜ ಕಟ್ಟಿ ಬೆಳಸುವ ಎಲ್ಲರೂ ಒಂದು ಕಡೆ ಸೇರಿರುವುದು ಖುಷಿಕೊಟ್ಟಿದೆ. ಸಮಾಜದ ಮಕ್ಕಳನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲೂ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ನಡೆಸಿದರೆ ಹೆಚ್ಚಿನ ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು. ಪ್ರತಿಯೊಬ್ಬರು ರಾಜಕೀಯವಾಗಿ ಬೆಳಯಲು ಅಸಾಧ್ಯ, ರಾಜಕೀಯವಾಗಿ ಬೆಳದವರು, ಜನಾಂಗದವರ ಹಿತ ಕಾಪಾಡಬೇಕು. ರಾಜಕೀಯ ಅಧಿಕಾರವನ್ನು ಎಲ್ಲರ ಜೊತೆ ಹಂಚಿಕೊಂಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆ, ಇಲ್ಲವೆಂದರೆ ಸೋಲುತ್ತಾರೆ. ಇಂದಿನ ಚುನಾವಣೆಗಳು ಬಾರಿ ದುಬಾರಿಯಾಗಿವೆ, ಸಮಾಜದವರು ಎಲ್ಲಾ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡು ಬೆಳೆಯರಿ, ಸಮಾಜದ ವಿಚಾರ ಬಂದಾಗ ಸಂಘಟಿತರಾಗಿ ರಾಜಕೀಯ ಅಧಿಕಾರ ಪಡೆಯಿರಿ ಎಂದು ಸಲಹೆ ನೀಡಿದರು.
ಸತ್ಯಾಗ್ರಹ ಎಂದರೆ ಸತ್ಯಕ್ಕಾಗಿ ಆಗ್ರಹ. ಆದರೆ ಇಂದು ಅಸತ್ಯಕ್ಕಾಗಿ ಆಗ್ರಹ ಮಾಡುವ ಕಾಲ ಬಂದಿದೆ, ಸಿದ್ದರಾಮಯ್ಯ ಮುಡಾ ಕೇಸು ಸಹ ಅಷ್ಟೇ. ವಿರೋಧ ಪಕ್ಷಗಳು ರಾಜಕೀಯಕ್ಕಾಗಿ 13 ವರ್ಷಗಳ ಹಿಂದಿನ ಪ್ರಕರಣವನ್ನು ತಂದು ಜನ ಮಾನಸದಲ್ಲಿ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ನಿವೇಶನ ನೀಡಿವರೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಡಾ.ಎಲ್.ಪಿ.ರಾಜು, ಶಾಂತಲ ರಾಜಣ್ಣ, ಡಾ.ಕೆ.ಆರ್.ರಾಜಕುಮಾರ್, ಮಾಜಿ ಶಾಸಕ ಸಾ.ಲಿಂಗಯ್ಯ ಮೊದಲಾದವರು ಹಾಜರಿದ್ದರು.