ರಾಜ್ಯ ಸರ್ಕಾರ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಅಕ್ಟೋಬರ್ 3 ರಂದು ಹೊರಡಿಸಿರುವ ಸುತ್ತೋಲೆ, ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳು ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿದ್ದು, ಸುತ್ತೊಲೆಯನ್ನು ಪುನರ್ ಪರಿಶೀಲಿಸಬೇಕು ಹಾಗೂ ತಡೆಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ.ಹರೀಶ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸುತ್ತೊಲ್ಲೆಯಲ್ಲಿ ತಿಳಿಸಿರುವಂತೆ ಕಾರ್ಯಭಾರವಿಲ್ಲದ ಉಪನ್ಯಾಸಕರನ್ನು ಹತ್ತಿರದ ಅನುದಾನಿತ ಕಾಲೇಜಿಗೆ ನಿಯೋಜಿಸುವಂತೆ ಸೂಚನೆ ನೀಡಲಾಗಿದೆ. ಇದರಲ್ಲಿ ಹಲವಾರು ನ್ಯೂನತೆಗಳಿವೆ. ಹಾಗಾಗಿ ಸರ್ಕಾರ ತನ್ನ ಸುತ್ತೊಲ್ಲೆಯನ್ನು ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ನಿಯೋಜಿಸಲು ಇರುವ ನಿರ್ಬಂಧವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಹಿಂದೆ ಎರಡು ಸಂಯೋಜನೆಗೆ ಅನುಮೋದನೆ ಕೊಟ್ಟು ಈಗ 20 ಗಂಟೆಗಳ ಕಾರ್ಯಭಾರ ಸಮಸ್ಯೆಯನ್ನು ತಂದಿಟ್ಟಿರುವುದು ಸರಿಯಲ್ಲ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 821 ಅನುದಾನಿತ ಪದವಿಪೂರ್ವ ಕಾಲೇಜುಗಳ ಸುಮಾರು 6000 ನೌಕರರು ಸರ್ಕಾರದ ಸುತ್ತೊಲೆಯಿಂದ ಆಂತಕಕ್ಕೆ ಒಳಗಾಗಿದ್ದಾರೆ. ಇಲಾಖೆಯ ನಿರ್ದೇಶಕರ ಮೌಖಿಕ ಆದೇಶಕ್ಕೆ ಮಣಿದು ಇದುವರೆಗೂ ಕಾರ್ಯಭಾರವಿಲ್ಲದೆ ನಿಯೋಜನೆಗೆ ಒಳಗಾಗದ ಉಪನ್ಯಾಸಕರಿಗೆ ವೇತನ ಮತ್ತು ಭತ್ಯೆಗಳನ್ನು ತಡೆಹಿಡಿಯಲಾಗಿದೆ. ಮೊದಲು ತಡೆ ಹಿಡಿದಿರುವ ವೇತನ ಬಿಡುಗಡೆ ಮಾಡಿ, ನಂತರ ಕಾರ್ಯಾಭಾರದ ಕುರಿತು ಸಂಘಟನೆಯೊಂದಿಗೆ ಮಾತನಾಡಿ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಗೌರವಾಧ್ಯಕ್ಷ ಶ್ರೀಕಂಠಯ್ಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಆನಂದ್, ಪ್ರಾಂಶುಪಾಲ ಸಂಘದ ಉಪಾಧ್ಯಕ್ಷ ಕುಮಾರಯ್ಯ, ತುಮಕೂರು ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ರಾಜ್ಯ ಪ್ರತಿನಿಧಿ ಬಿ.ಆರ್ ಮಂಜುನಾಥ್, ರಾಮನಗರ ಜಿಲ್ಲೆಯ ಅಧ್ಯಕ್ಷ ಗೋವಿಂದರಾಜು, ಪುಟ್ಟಸ್ವಾಮಿ, ರಾಜ್ಯ ಸದಸ್ಯರಾದ ಉಷಾ ಪಟೇಲ್, ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ದೇವರಾಜು, ಪ್ರದಾನ ಕಾರ್ಯದರ್ಶಿ ಆನಂದ್, ರಾಜ್ಯ ಕಾರ್ಯದರ್ಶಿ ಬಿ.ಎಲ್.ಯಶವಂತ್, ಮೋಹನ್ ಹೆಗ್ಗಡೆ, ಕುಬೇಂದ್ರ, ಉಮೇಶ್, ಬೋರಪ್ಪ, ಪರಮೇಶ್ವರಪ್ಪ, ವೆಂಕಟಾಚಲ, ದೇವರಾಜು ಇದ್ದರು.