ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ತೀವ್ರ ಕುಸಿತ ಕಂಡಿದೆ. ವರ್ಷದ ಹಿಂದ ಶೇಕಡ 66ರಷ್ಟಿದ್ದ ಮೋದಿ ಜನಪ್ರಿಯತೆ ಪ್ರಸಕ್ತ ವರ್ಷದ ಆಗಸ್ಟ್ ವೇಳೆಗೆ ಶೇಕಡ 23ಕ್ಕೆ ಕುಸಿದಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನಪ್ರಿಯತೆಯಲ್ಲಿ ಏರಿಕೆ ಆಗಿರುವುದು ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಕೊವಿಡ್ ಎರಡನೇ ಅಲೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿರುವುದು ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಪ್ರಧಾನಿ ಮೋದಿ ಜನಪ್ರಿಯತೆ ಕುಸಿತಕ್ಕೆ ಕಾರಣ ಎಂದು ಸಮೀಕ್ಷೆ ಬೊಟ್ಟು ಮಾಡಿದೆ. ಪ್ರತಿಪಕ್ಷಗಳು ಕೂಡ ಕೊರೊನ ನಿರ್ವಣೆಯಲ್ಲಿ ಒಕ್ಕೂಟ ಸರ್ಕಾರ ವಿಫಲವಾಗಿದೆ. ಆರ್ಥಿಕತೆ ಕುಸಿದಿದೆ ಎಂದು ಆರೋಪಿಸಿದ್ದವು. ಪ್ರತಿಪಕ್ಷಗಳ ಆರೋಪ ಸತ್ಯ ಎಂಬುದನ್ನು ಸಮೀಕ್ಷೆ ದೃಢಪಡಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಜನಪ್ರಿಯತೆ ಹೆಚ್ಚಾಗಿದೆ. ಕಳೆದ ವರ್ಷ ಶೇಕಡ 10ರಷ್ಟಿದ್ದ ಜನಪ್ರಿಯತೆ ಒಂದು ವರ್ಷದೊಳಗೆ ಶೇ1ರಷ್ಟು ಹೆಚ್ಚಳ ಕಂಡಿದೆ. ಆದಿತ್ಯನಾಥ್ ದೇಶದ ಪ್ರಧಾನಿಯಾಗಬಹುದು ಶೇಕಡ 11ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲೂ ಹೆಚ್ಚಳವಾಗಿರುವುದನ್ನು ಸಮೀಕ್ಷೆ ದೃಢಪಡಿಸಿದೆ. ದೇಶದ ಶೇಕಡ 10ರಷ್ಟು ಜನರು ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಪ್ರಧಾನಿಯಾಗಬಹುದು ಎಂದು ಶೇಕಡ 8ರಷ್ಟು ಮಂದಿ ಹೇಳಿದ್ದಾರೆ. ಅತ್ಯಂತ ಬಲಿಷ್ಠ ಗೃಹ ಸಚಿವರೆಂದು ಹೇಳುವ ಅಮಿತ್ ಶಾಗೆ ಶೇಕಡ 7ಮಂದಿ ಮಾತ್ರ ಮತ ಹಾಕಿದ್ದಾರೆ.