ಆಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ದಾಳಿ ತೀವ್ರಗೊಳಿಸಿರುವುದರಿಂದ ಭೀತರಾಗಿರುವ ಜನ ಪ್ರಾಣ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣಕ್ಕೆ ನುಗ್ಗಿರುವ ನೂರಾರು ಆಫ್ಘನ್ ಜನರು ಚಾಲನೆಯಲ್ಲಿರುವ ವಿಮಾನಕ್ಕೆ ಏರಿ ಕುಳಿತುಕೊಳ್ಳಲು ಮುಗಿಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ.
ತಾಲಿಬಾನ್ ಉಗ್ರರು ಹಲವು ಜೈಲುಗಳಲ್ಲಿದ್ದ ಖೈದಿಗಳನ್ನು ಬಿಡುಗಡೆಗೊಳಿಸಿದ ಬಳಿಕವೂ ತಾಲಿಬಾನ್ ಉಗ್ರರು ಕೆಟ್ಟ ನಿಯಮಗಳನ್ನು ಹೇರುವ ಭೀತಿಯಿಂದ ಸಾಮಾನ್ಯ ಜನರು ತಮ್ಮ ಪ್ರಾಣ ರಕ್ಷಣೆಗೆ ವಿಮಾನಗಳ ಮೂಲಕ ಬೇರೆಡೆ ತೆರಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜನರು ವಿಮಾನ ನಿಲ್ದಾಣಕ್ಕೆ ನುಗ್ಗುತ್ತಿದ್ದಂತೆ ಎಚ್ಚೆತ್ತ ಆಫ್ಘಾನಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ ಮುಂದಿನ ನೋಟಿಸ್ ಬರುವವರೆಗೂ ನಿಲ್ದಾಣಕ್ಕೆ ಯಾರೂ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುವ ಎಚ್ಚರಿಕೆ ನೀಡಿದರೂ ಕೆಲವು ನಾಗರಿಕರು ವಿಮಾನಕ್ಕೆ ನೇತಾಡುತ್ತಿದ್ದ ದೃಶ್ಯಗಳಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಅಮೆರಿಕಾ ಪಡೆಗಳು ದೇಶ ತೊರೆಯುತ್ತಿರುವ ಮಧ್ಯದಲ್ಲಿಯೇ ಆಫ್ಘನ್ ನಾಗರಿಕರು ತಾಲಿಬಾನ್ ನಿಯಂತ್ರಣದಲ್ಲಿರುವ ಗಡಿಗಳನ್ನು ದಾಟಿ ಹೋಗುತ್ತಿದ್ದಾರೆ. “ಕಾಬೂಲ್ ನಲ್ಲಿ ನಡೆಯುತ್ತಿರುವ ಘಟನೆಗಳು ಹೃದಯನ್ನು ಛಿದ್ರಗೊಳಿಸುವಂತಿವೆ” ಎಂದು ಅಮೆರಿಕಾದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.