Friday, October 18, 2024
Google search engine
Homeಮುಖಪುಟಸತೀಶ್ ಜಾರಕಿಹೊಳಿ ಭೇಟಿಯಲ್ಲಿ ರಹಸ್ಯವೇನೂ ಇಲ್ಲ-ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

ಸತೀಶ್ ಜಾರಕಿಹೊಳಿ ಭೇಟಿಯಲ್ಲಿ ರಹಸ್ಯವೇನೂ ಇಲ್ಲ-ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ನನ್ನ ನಡುವೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಕೇವಲ ಊಟದ ಚರ್ಚೆ ಅಷ್ಟೇ. ಸತೀಶ್ ಜಾರಕಿಹೊಳಿ ಜೊತೆಗಿನ ಭೇಟಿ ರಹಸ್ಯವೇನೂ ಇಲ್ಲ. ಮಾಧ್ಯಮಗಳ ಕಣ್ಣು ತಪ್ಪಿಸಿ ಬಂದರೆ ರಹಸ್ಯ. ಮಾಧ್ಯಮಗಳ ಮುಂದೆಯೇ ಬಂದರೆ ರಹಸ್ಯ ಹೇಗಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿಯವರು ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ನಾನು ಐಬಿಯಲ್ಲಿದ್ದೇನೆ ಗೊತ್ತಾದ ಮೇಲೆ ಸತೀಶ್ ಜಾರಕಿಹೊಳಿ ಐಬಿಗೆ ಬಂದಿದ್ದರು. ಅಷ್ಟೊತ್ತಿಗಾಗಲೇ ನಾನು ನಮ್ಮ ಕಾಲೇಜು ಕ್ಯಾಂಪಸ್ ಗೆ ಹೋಗಿದ್ದೆ. ಹೀಗಾಗಿ ಅವರು ನಮ್ಮ ಕಾಲೇಜಿಗೆ ಬಂದರು ಎಂದು ಹೇಳಿದರು.

ಕಾಲೇಜಿಗೆ ಬಂದಾಗ ಸತೀಶ್ ಜಾರಕಿಹೊಳಿಯವರು ಊಟಾನೂ ಮಾಡಿರಲಿಲ್ಲ. ಹಾಗಾಗಿ ಕಾಲೇಜು ಗೆಸ್ಟ್ ಹೌಸ್ ನಲ್ಲೇ ಊಟ ಮಾಡಿಕೊಂಡು ಹೋದರು. ಊಟದ ವೇಳೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಊಟದ ಚರ್ಚೆ ಅಷ್ಟೇ, ಬೇರೇನೂ ಚರ್ಚೆ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ನಡೆದ ಮಾತುಕತೆಯ ಕುರಿತು ಚರ್ಚೆ ನಡೆಸಲಾಯಿತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ‘ಅದು ನನಗೆ ಗೊತ್ತಿಲ್ಲ. ಅವರಿಗೂ ಗೊತ್ತಿಲ್ಲ. ಪ್ರತಿ ಭಾರಿ ಭೇಟಿಯಾದಗಲೆಲ್ಲ ಅದನ್ನೇ ಮಾತನಾಡುವುದಕ್ಕೆ ಆಗುವುದಿಲ್ಲ. ಆದರೆ ಯಾವಾಗ ಮಾತನಾಡಬೇಕೋ ಆಗ ಖಂಡಿತ ಮಾತನಾಡುತ್ತೇವೆ. ರಾಜಕೀಯ ಮಾತನಾಡುವ ಸಂದರ್ಭ ಬಂದಾಗ ಮಾತನಾಡುತ್ತೇವೆ. ಈಗ ಅಂತಹ ಸಂದರ್ಭ ಬಂದಿಲ್ಲ ಎಂದು ಹೇಳಿದರು.

ಪದೇ ಪದೇ ಭೇಟಿಯಾಗುತ್ತಿರುವಿರಲ್ಲಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ನಾವು ಪದೇಪದೇ ಭೇಟಿಯಾಗುತ್ತಿಲ್ಲ. ಆದರೆ ನಾವೆಲ್ಲ ಒಗ್ಗಟ್ಟಾಗಿರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ನಿಲ್ಲಬೇಕು. ಮುಡಾ ಹಗರಣ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಅದರ ವಿರುದ್ಧವಾಗಿ ನಾವು ಕೂಡ ಸಂಘಟನೆ ಮಾಡಬೇಕು ಎನ್ನುವ ಕಾರಣಕ್ಕೆ ಭೇಟಿ ಮಾಡುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಹೀಗಾಗಿ ನಾವು ಸಿದ್ದರಾಮಯ್ಯ ಜೊತೆ ನಿಂತಿದ್ದೇವೆ. ಈ ಹಿನ್ನೆಲೆಯಲ್ಲಿ ಆಗಾಗ ಭೇಟಿಯಾಗಿ ಮಾತನಾಡಿಕೊಳ್ಳುತ್ತೇವೆ. ಸರ್ಕಾರದ ವಿರುದ್ಧ ಯಾರೋ ಏನೋ ಹೇಳಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದು ಸರಿಯಿಲ್ಲ ಎಂದು ಹೇಳಬೇಕಾಗುತ್ತದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular