ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡಬೇಡಿ. ಮೊದಲು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಬಿಜೆಪಿ ಈಗ ಗಳಿಗೆಗೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಬಿಜೆಪಿ ನಿಮ್ಮನ್ನು ಯಾಮಾರಿಸಿ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎನ್ನುವ ನಂಬಿಕೆ ನನಗಿದೆ. ಏಕೆಂದರೆ ಕೊಪ್ಪಳ, ಬಳ್ಳಾರಿ, ವಿಜಯನಗರದ ಜನತೆ ಏನು ಅಂತ ನನ್ನ ಹೃದಯಕ್ಕೆ ಚನ್ನಾಗಿ ಗೊತ್ತು. ಬಿಜೆಪಿ ಮಾತನ್ನು ನಂಬಬೇಡಿ. ಎರಡೂ ಬೆಳೆಗೂ ನೀರು ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎರಡನೇ ಬಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಅತ್ಯಂತ ತುರ್ತಾಗಿ ಅಳವಡಿಸಿದ ಎಂಜಿನಿಯರ್ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಅಣೆಕಟ್ಟೆಯ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದನ್ನು ಪರಿಶೀಲಿಸಲು ಆಗಸ್ಟ್ 13 ರಂದು ಇಲ್ಲಿಗೆ ಆಗಮಿಸಿದ್ದೆ. ತುಂಗಭದ್ರಾ ಅಣೆಕಟ್ಟು ಮತ್ತೆ ಮೈ ತುಂಬಿಕೊಳ್ಳುತ್ತದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಆಗ ಹೇಳಿದ್ದೆ. ಕೊಟ್ಟ ಮಾತಿನಂತೆ ಇಂದು ಬಾಗಿನ ಅರ್ಪಿಸಿದ್ದೇನೆ ಎಂದರು.
ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆ ಕೊಟ್ಟಿದ್ದೀರಿ. ನಾವು ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ 46 ವಿಷಯಗಳನ್ನು, ಅನೇಕ ಕಾರ್ಯಕ್ರಮಗಳನ್ನು ಕಲ್ಯಾಣ ಕರ್ನಾಟಕದ ಅಭಿವಧ್ಧಿಗಾಗಿ ಘೋಷಿಸಿದ್ದೇವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ 371 ಜೆ ಜಾರಿ ಮಾಡಿದರು ಎಂದು ತಿಳಿಸಿದರು.
ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಗೋವಿಂದರಾವ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ನೀಡುತ್ತಿದ್ದಂತೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೊಸ ನೀಲನಕ್ಷೆ ರಚಿಸುತ್ತೇವೆ. ಈಗಾಗಲೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ₹5,000 ಕೋಟಿ ಘೋಷಿಸಿ ಆಗಿದೆ. ಕೇಂದ್ರ ಸರ್ಕಾರ ಕೂಡ ₹5,000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಕೇಂದ್ರ ಕೊಡುತ್ತದೋ ಇಲ್ಲವೋ ನೀವೇ ನೋಡಿ ಎಂದು ಹೇಳಿದರು.