ಸಮಕಾಲೀನ ಸಂದರ್ಭದಲ್ಲಿಯೂ ದುಃಖ ಆರದ ನೆಲದಲ್ಲಿಯೇ ನಾವು ಬದುಕುತ್ತಿದ್ದೇವೆ. ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ನಾಡೋಜ, ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಕೌದಿ ಪ್ರಕಾಶನ ಮತ್ತು ತಮಟೆ ಮೀಡಿಯಾ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುಬ್ಬು ಹೊಲೆಯಾರ್ ಅವರ ‘ದುಃಖ ಆರದ ನೆಲದಲ್ಲಿ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್.ಸಿ.ಆರ್.ಬಿ ಮಾಹಿತಿ ಪ್ರಕಾರ 2021ರ ನಂತರ ಪರಿಶಿಷ್ಟ ಜಾತಿಗಳ ಮೇಲೆ ನಡೆಯುತ್ತಿರುವ ದರ್ಜನ್ಯಗಳು ಶೇ.14.1ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಪ್ರತಿನಿತ್ಯ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ ಎಂದು ಎನ್.ಸಿ.ಆರ್.ಬಿ. ಹೇಳುತ್ತದೆ. ಅದೆಷ್ಟೋ ಪ್ರಕರಣಗಳ ಬಗ್ಗೆ ದೂರು ದಾಖಲಾಗುವುದಿಲ್ಲ ಎಂದು ಹೇಳಿದರು.
ಹಿಂಸಾತ್ಮಕ ಭಾಷೆಗಳ ವಿಜೃಂಭಣೆಯಲ್ಲಿ ನಾವು ಬದುಕುತ್ತಿದ್ದೇವೆ. ಭಾಷಿಕ ಭ್ರಷ್ಟಾಚಾರವನ್ನು ಇತ್ತೀಚೆಗೆ ನೋಡುತ್ತಿದ್ದೇವೆ. ಭಾಷೆಯನ್ನು ಕೆಡಿಸುವ ಕೆಲಸ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಕೂಡಿಸುವ ಕವಿ ಮನಸ್ಸು ಅಗತ್ಯ. ಸುಬ್ಬು ಹೊಲೆಯಾರ್ ಅವರು ಸ್ವಂತ ಅನುಭವದ ಮೂಲಕ ದಲಿತ ಕಥನವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಕೃತಿಯ ಕುರಿತು ಮೆಚ್ಚುಗೆಯ ಮಾತನಾಡಿದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶ್ ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ಕಾಲು ಇನ್ನೊಬ್ಬರ ತಲೆಯ ಮೇಲಿದೆಯೆಂಬ ಅಹಂಕಾರ ಹೊಂದಿದ್ದಾರೆ. ಇದರಿಂದಾಗಿ ಕಟ್ಟ ಕಡೆಯ ವ್ಯಕ್ತಿಯ ದುಃಖ ಅರ್ಥವಾಗುತ್ತಿಲ್ಲ. ಕೃತಿ ಆತ್ಮಕಥೆಯ ಮಾದರಿಯಲ್ಲಿದೆ ಎಂದು ತಿಳಿಸಿದರು.
ಲೇಖಕ ಸುಬ್ಬು ಹೊಲೆಯಾರ್, ಎನ್.ವೆಂಕಟೇಶ್, ಕೆ.ಪಿ.ಅಶ್ವಿನಿ ಇದ್ದರು.